ಟಿಪ್ಪು ಜಯಂತಿಗೆ ಬಿಗಿ ಭದ್ರತೆ; ಬೆಂಗಳೂರಿನಲ್ಲಿ 15 ಸಾವಿರ ಪೊಲೀಸ್​ ಸಿಬ್ಬಂದಿ ನಿಯೋಜನೆ!

ಬೆಂಗಳೂರು : ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಟಿಪ್ಪು ಜಯಂತಿ ಆಚರಣೆ ನಡೆಸುತ್ತಿದೆ. ಇಂದು ಬೆಳಗ್ಗೆ 11.30ಕ್ಕೆ ವಿಧಾನಸೌಧದ ಬ್ಯಾಂಕ್ವೇಟ್​​ ಹಾಲ್​ನಲ್ಲಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್​ ಈ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದದಾದ್ಯಂತ ಬಿಗಿ ಬಂದೋಬಸ್ತ್​ ಏರ್ಪಡಿಸಲಾಗಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ನಗರಾದ್ಯಂತ 15 ಸಾವಿರಕ್ಕೂ ಅಧಿಕ ಪೊಲೀಸ್​ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ವಿಧಾನಸೌಧ ಸುತ್ತಮುತ್ತ 500ಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿ ಕಾವಲು ಕಾಯಲಿದ್ದಾರೆ. ಕಳೆದ ವರ್ಷ ವಾಹನ ಪಾರ್ಕಿಂಗ್​ನಲ್ಲಿ ಅವ್ಯವಸ್ಥೆಯಾಗಿತ್ತು. ಆದರೆ ಈ ಬಾರಿ ಆ ಸಮಸ್ಯೆ ಇರುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇನ್ನು, ‘ಟಿಪ್ಪು ಜಯಂತಿ ಆಚರಿಸಬಾರದು ಎಂದು ನಮಗೆ ಯಾವುದೇ ಮನವಿ-ದೂರುಗಳು ಬಂದಿಲ್ಲ’ ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದ 30 ಜಿಲ್ಲೆಗಳಲ್ಲಿ ಟಿಪ್ಪು ಜಯಂತಿ ಆಚರಿಸಲಾಗುತ್ತಿದ್ದು, ಎಲ್ಲ ಕಡೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಟಿಪ್ಪು ಜಯಂತಿ ಆಚರಣೆಗೆ ಕೊಡಗಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಮಡಿಕೇರಿಯಲ್ಲಿ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳು ಬಂದ್​ ಮಾಡಲಾಗಿದ್ದು, ಖಾಸಗಿ ಬಸ್​ ಹಾಗೂ ಆಟೋ ಸಂಚಾರ ಸಂಪೂರ್ಣವಾಗಿ ಬಂದ್​ ಮಾಡಲಾಗಿದೆ. ರಾಜ್ಯ ಸರ್ಕಾರದ ನಡೆ ಖಂಡಿಸಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ.

ಇನ್ನು, ಆಲೂರು ವೆಂಕಟರಾಯ ರಸ್ತೆಗೆ ಟಿಪ್ಪು ಹೆಸರಿಡುವ ವಿವಾದಕ್ಕೆ ತೆರೆಬಿದ್ದಿಲ್ಲ. ಈ ಮೊದಲು ಬಿಜೆಪಿಯವರು ಈ ಪ್ರಸ್ತಾಪ ಮಂಡಿಸಿದ್ದರು. ಈಗ ಅವರಿಂದಲೇ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ ಎನ್ನಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ