ಮಥುರಾ, ನ.10- ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ದೊಡ್ಡ ಅಡ್ಡಿ ಎಂದು ಆರೋಪಿಸಿರುವ ಉತ್ತರ ಪ್ರದೇಶ ಸಚಿವ ಶ್ರೀಕಾಂತ್ ಶರ್ಮ ರಾಹುಲ್ ಗಾಂಧಿಯವರು ದೇವಸ್ಥಾನಗಳಿಗೆ ಭೇಟಿ ನೀಡುವ ಬದಲು ಅಯೋಧ್ಯೆ ಬಗ್ಗೆ ತಮ್ಮ ಸ್ಪಷ್ಟ ನಿಲುವು ವ್ಯಕ್ತಪಡಿಸಲಿ ಎಂದು ಒತ್ತಾಯಿಸಿದ್ದಾರೆ.
ಮಥುರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ಗಾಂಧಿಯವರು ದೇವಸ್ಥಾನ ಮತ್ತು ಮಂದಿರಗಳಿಗೆ ಭೇಟಿ ನೀಡಿದ ಕೂಡಲೇ ಎಲ್ಲಾ ಸಮಸ್ಯೆಗಳು ಬಗೆಹರಿಯುವುದಿಲ್ಲ. ವಾಸ್ತವ ಸನ್ನಿವೇಶವನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದರು.
ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ದೊಡ್ಡ ಅಡ್ಡಿ, ಆತಂಕವಾಗಿದೆ.ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿ ಅಯೋಧ್ಯೆ ವಿಷಯದಲ್ಲಿ ರಾಹುಲ್ ಗಾಂಧಿ ಸ್ಪಷ್ಟ ಅಭಿಪ್ರಾಯ ತಿಳಿಸಬೇಕು. ಅವರ ಜಾಣ ಕಿವುಡು ಮತ್ತು ಕುರುಡುತನ ಸಮರ್ಥನೀಯವಲ್ಲ ಎಂದು ಶ್ರೀಕಾಂತ್ ಶರ್ಮ ವ್ಯಂಗ್ಯವಾಡಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ಪ್ರತಿಯೊಬ್ಬ ಹಿಂದೂ ಧರ್ಮೀಯರ ಆಕಾಂಕ್ಷೆ ಇದು ಸ್ವಾಭಿಮಾನ ಮತ್ತು ಗೌರವದ ವಿಷಯವೂ ಆಗಿದೆ. ಆದರೆ ಕಾಂಗ್ರೆಸ್ ಈ ವಿಚಾರದಲ್ಲಿ ಬೇಜವಾಬ್ದಾರಿತನ ತೋರುತ್ತಿದೆ ಎಂದು ಅವರು ಆರೋಪಿಸಿದರು.