ನವದೆಹಲಿ: ಭಾರತೀಯ ಸೇನೆ ತನ್ನ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದು, ಅಮೆರಿಕದಿಂದ ಖರೀದಿ ಮಾಡಿರುವ ಅತ್ಯಾಧುನಿಕ 155 ಎಂ.ಎಂ/39 ಕ್ಯಾಲಿಬ್ರೆ ಸಾಮರ್ಥ್ಯದ ಎಂ-777 ಹೊವಿಟ್ಜರ್ ಫಿರಂಗಿ ಸೇರಿದಂತೆ ಮೂರು ಅತ್ಯಾಧುನಿಕ ಫಿರಂಗಿಗಳು ಭಾರತೀಯ ಸೇನೆಗೆ ಸೇರ್ಪಡೆಯಾಗಿವೆ.
ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅತ್ಯಾಧುನಿಕ M777 ಹೊವಿಟ್ಜರ್ ಫಿರಂಗಿಗೆ ಹಸಿರು ನಿಶಾನೆ ತೋರುವ ಮೂಲಕ ಫಿರಂಗಿಯನ್ನು ಅಧಿಕೃತವಾಗಿ ಸೇನೆಗೆ ಸೇರ್ಪಡೆಗೊಳಿಸಿದರು.
M777 ಹೊವಿಟ್ಜರ್ ಫಿರಂಗಿಗೆ ‘ಕೆ-9 ವಜ್ರ ಟಿ ಎಂದು ಮರು ನಾಮಕರಣ ಮಾಡಲಾಗಿದ್ದು, ಭಾರತೀಯ ಸೈನಿಕರು ಫಿರಂಗಿಗೆ ಚಾಲನೆ ನೀಡಿದರು.
ಈ ಕುರಿತು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದು, ಎಂ777 ಹೊವಿಟ್ಜರ್ ಫಿರಂಗಿ ಹಗುರವಾಗಿದ್ದು, ಇದನ್ನು ಹೆಲಿಕಾಪ್ಟರ್ ಮೂಲಕ ಬೆಟ್ಟಗುಡ್ಡಗಳ ಮೇಲೆ ರವಾನೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.
ಬೋಫೋರ್ಸ್ ಫಿರಂಗಿ ಹಗರಣದ ನಂತರ 30 ವರ್ಷಗಳ ಕಾಲ ಭಾರತ ಯಾವುದೇ ಫಿರಂಗಿಯನ್ನು ಅನ್ಯದೇಶಗಳಿಂದ ಖರೀದಿಸಿರಲಿಲ್ಲ. ಇದರಿಂದಾಗಿ ಸೇನೆಯಲ್ಲಿ ಫಿರಂಗಿಗಳ ಆಭಾವ ಎದುರಾಗಿತ್ತು. ಸೇನೆಯ ಈ ಕೊರತೆ ನಿಭಾಯಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಮೆರಿಕದ ಜತೆ 5000 ಕೋಟಿ ರೂ. ಮೊತ್ತದ 145 ಫಿರಂಗಿಗಳ ಖರೀದಿ ಒಪ್ಪಂದ ಮಾಡಿಕೊಂಡಿತ್ತು. ಈ ಹಿನ್ನಲೆಯಲ್ಲಿ ಬಿಎಇ ಸಿಸ್ಟಮ್ಸ್ ಕಂಪನಿಯು ಮೊದಲ ಭಾಗವಾಗಿ ಕಳುಹಿಸಿದ್ದ ಎರಡು ಫಿರಂಗಿಗಳು ಮೇನಲ್ಲಿ ಭಾರತಕ್ಕೆ ಬಂದಿದ್ದವು. 2018ರ ಸೆಪ್ಟೆಂಬರ್ ಹೊತ್ತಿಗೆ ಇನ್ನೂ 3 ಫಿರಂಗಿಗಳು ಭಾರತಕ್ಕೆ ಬಂದಿದ್ದು, ಇದೀಗ ಮತ್ತೆ ಮೂರು ಫಿರಂಗಿಗಳು ಸೇನೆಗೆ ಸೇರ್ಪಡೆಯಾಗಿವೆ.
ಎಲ್ಲಾ ಫಿರಂಗಿಗಳನ್ನು ಹಲವು ಪರೀಕ್ಷಾರ್ಥ ಪ್ರಯೋಗಗಳಿಗೆ ಒಳಪಡಿಸಿ 2019ರ ಹೊತ್ತಿಗೆ ಪೂರ್ಣ ಪ್ರಮಾಣದಲ್ಲಿ ಸೇನಾ ಬತ್ತಳಿಕೆ ಸೇರಿಸಿಕೊಳ್ಳುವುದಾಗಿ ಸೇನಾ ಮೂಲಗಳು ತಿಳಿಸಿವೆ. ಅಂತೆಯೇ 2021ರ ಹೊತ್ತಿಗೆ ಎಲ್ಲ 145 ಫಿರಂಗಿಗಳು ಭಾರತೀಯ ಸೇನೆ ಬತ್ತಳಿಕೆ ಸೇರಲಿವೆ.