ಮೀಟರ್ ಬಡ್ಡಿಗೆ ಕಡಿವಾಣ ಹಾಕಲು ನ.22ರಂದು ಬಡವರ ಬಂಧು ಯೋಜನೆಗೆ ಚಾಲನೆ

ಬೆಂಗಳೂರು, ನ.9- ಮೀಟರ್ ಬಡ್ಡಿಗೆ ಕಡಿವಾಣ ಹಾಕಿ. ಸಣ್ಣಪುಟ್ಟ ವ್ಯಾಪಾರಿಗಳಿಗೆ ನೆರವಾಗುವ ದೃಷ್ಟಿಯಿಂದ ಸರ್ಕಾರದ ಮಹತ್ವಾಕಾಂಕ್ಷೆಯ ಬಡವರ ಬಂಧು ಯೋಜನೆಯನ್ನು ನ.22ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಉದ್ಘಾಟಿಸಲಿದ್ದಾರೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಈ ಮಹತ್ವಾಕಾಂಕ್ಷಿ ಬಡವರ ಬಂಧು ಯೋಜನೆಯಡಿ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವಂತೆ ಮುಖ್ಯಮಂತ್ರಿಗಳು ನಿನ್ನೆ ಹೇಳಿದ್ದಾರೆ. ನಗರದ ಎಪಿಎಂಸಿಯಾರ್ಡ್‍ನಲ್ಲಿ ಈ ಯೋಜನೆ ಅಧಿಕೃತವಾಗಿ ಉದ್ಘಾಟನೆಯಾಗಲಿದೆ ಎಂದರು.
ಈ ಯೋಜನೆಯಲ್ಲಿ ಎರಡರಿಂದ 10ಸಾವಿರ ರೂ. ಸಾಲವನ್ನು ಸಣ್ಣಪುಟ್ಟ ವ್ಯಾಪಾರಿಗಳಿಗೆ ಯಾವುದೇ ಗ್ಯಾರಂಟಿ ಇಲ್ಲದೆ ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುವುದು. ಆಧಾರ್ ಕಾರ್ಡ್ ಕೊಟ್ಟು ಸಾಲ ಪಡೆಯಬಹುದು. ಸಂಜೆ ನೂರು, 200ರೂ.ನಂತೆ ಮರು ಪಾವತಿ ಮಾಡಬೇಕು. ಪ್ರತಿ ದಿನ ಅಥವಾ ವಾರದ ಕಂತಿನಲ್ಲೂ ಹಣ ಪಾವತಿಸಲು ಅವಕಾಶವಿದೆ. ಇದಕ್ಕಾಗಿ ಪ್ರತಿ ಜಿಲ್ಲೆಗೆ ಒಂದರಂತೆ ಮೊಬೈಲ್ ವ್ಯಾನ್ ನೀಡಲಾಗುವುದು ಎಂದು ತಿಳಿಸಿದರು.

ಈ ವರ್ಷ 53ಸಾವಿರ ಮಂದಿಗೆ ಸಾಲ ನೀಡುವ ಉದ್ದೇಶವಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂರು ಸಾವಿರ ಮಂದಿಗೆ, ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ 2000 ಮಂದಿಗೆ ಸಾಲ ನೀಡಲಾಗುವುದು ಎಂದು ಹೇಳಿದರು.

ಕಾಯಕ ಯೋಜನೆಯಡಿ ಉದ್ಯೋಗ ಕೈಗೊಳ್ಳಲು ಸ್ವಯಂ ಸೇವಾ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ಈ ತಿಂಗಳ ಅಂತ್ಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಪ್ರಾರಂಭಿಸಲಾಗುವುದು. ಈ ಯೋಜನೆ ಕುರಿತು ನಿಯಮಾವಳಿ ರೂಪಿಸಲಾಗಿದೆ. ಇದಕ್ಕೆ ಸರ್ಕಾರದ ಅಧಿಕೃತ ಆದೇಶವೂ ಆಗಿದೆ ಎಂದು ತಿಳಿಸಿದರು.

ಜಿಲ್ಲಾವಾರು ಯುವ ಉದ್ಯಮಿಗಳಿಗೆ ನೆರವು ನೀಡಬೇಕೆಂಬ ಉದ್ದೇಶವಿದ್ದು, ಇದಕ್ಕೆ ಪಟ್ಟಿ ಸಿದ್ದವಿದೆ. ಇದಕ್ಕೆ ಮೂರು ಸಾವಿರ ಸ್ವಸಹಾಯ ಸಂಘಗಳಿಗೆ ಐದು ಲಕ್ಷದವರೆಗೆ ಬಡ್ಡಿ ರಹಿತ, ಐದು ಲಕ್ಷ ಮೇಲ್ಪಟ್ಟರೆ ಶೇ.4ರಷ್ಟು ಬಡ್ಡಿ ದರದಲ್ಲಿ ನೆರವು ನೀಡಲಾವುದು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ