ರೆಡ್ಡಿ ಪ್ರಕರಣದಿಂದ ಅಂತರ ಕಾಯ್ದುಕೊಂಡ ಬಿಜೆಪಿ

ಬೆಂಗಳೂರು,ನ.9-ಡೀಲ್ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಯಿಂದ ಬಿಜೆಪಿ ಮತ್ತೆ ಅಂತರ ಕಾಯ್ದುಕೊಂಡಿದೆ. ತೆರೆಮರೆಯಲ್ಲಿದ್ದುಕೊಂಡೇ ಕಾನೂನು ಹೋರಾಟ ಮಾಡುವ ಸಂದಿಗ್ಧ ಪರಿಸ್ಥಿತಿಯನ್ನು ರೆಡ್ಡಿ ಎದುರಿಸುವಂತಾಗಿದೆ.

ಕಾಂಗ್ರೆಸ್‍ನಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಪ್ರಭಾವಿ ನಾಯಕಾರಾಗಿದ್ದು, ಐಟಿ ದಾಳಿ ವೇಳೆ ಪಕ್ಷದ ನಾಯಕರು ಅವರ ಪರ ನಿಂತಿದ್ದರು. ಆದರೆ ಇದೀಗ ರೆಡ್ಡಿ ಪ್ರಕರಣದಿಂದ ಬಿಜೆಪಿ ನಾಯಕರು ಅಂತರ ಕಾಯ್ದುಕೊಂಡಿದ್ದು, ಗಣಿಧಣಿ ಏಕಾಂಗಿಯಾಗೇ ಹೋರಾಡಬೇಕಿದೆ.

ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದು, ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಸಚಿವ ಸ್ಥಾನದಲ್ಲಿದ್ದ ಜನಾರ್ದನ ರೆಡ್ಡಿಯನ್ನು ರಾತ್ರೋ ರಾತ್ರಿ ಬಂಧಿಸಲಾಗಿತ್ತು. ಆಗಲೂ ಬಿಜೆಪಿ ನಾಯಕರು ತುಟಿ ಬಿಚ್ಚಿರಲಿಲ್ಲ. ಅಂದು ಸರ್ಕಾರ ರಚನೆಯಲ್ಲಿ ರೆಡ್ಡಿ ತಂಡ ಪ್ರಮುಖ ಪಾತ್ರ ವಹಿಸಿದ್ದರೂ ರೆಡ್ಡಿಯಿಂದ ದೂರವಾಗಿದ್ದರು. ಆಗ ರೆಡ್ಡಿ ಪರ ನಿಂತಿದ್ದು ಅವರ ಆಪ್ತಮಿತ್ರ ಶ್ರೀರಾಮುಲು ಮಾತ್ರ.

ನಾಲ್ಕು ವರ್ಷ ಜೈಲುವಾಸದ ಬಳಿಕ ಬೇಲ್ ಪಡೆದುಕೊಂಡು ರೆಡ್ಡಿ ಹೊರಬಂದರೂ ಬಿಜೆಪಿಯೊಂದಿಗೆ ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಿಜೆಪಿ ಹೈಕಮಾಂಡ್ ನಿರ್ದೇಶನದ ಮೇರೆಗೆ ಬಹಿರಂಗವಾಗಿ ರೆಡ್ಡಿ ಜೊತೆ ಬಿಜೆಪಿ ನಾಯಕರು ಗುರುತಿಸಿಕೊಳ್ಳಲಿಲ್ಲ. ಅವರೊಂದಿಗೆ ಅಂತರ ಕಾಯ್ದುಕೊಂಡರು. ಆದರೆ ರೆಡ್ಡಿ ಮಾತ್ರ ಬಿಜೆಪಿ ಅಧಿಕಾರಕ್ಕೆ ತರುವುದೇ ತಮ್ಮ ಗುರಿ ಎಂದುಕೊಂಡೆ ತಿರುಗಾಡಿದ್ದರು.

ಇದೀಗ ಮತ್ತೆ ಡೀಲ್ ಆರೋಪ ಹೊತ್ತಿರುವ ರೆಡ್ಡಿ ಬೆನ್ನಿಗೆ, ಆಂಧ್ರಪ್ರದೇಶದ ವೈಎಸ್‍ಆರ್ ಕಾಂಗ್ರೆಸ್‍ನ ಕೆಲ ಆಪ್ತರು ಬಿಟ್ಟರೆ ಶ್ರೀರಾಮುಲು ಮಾತ್ರ ನಿಂತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ