ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಮಾತು

ಬೆಂಗಳೂರು,ನ.9- 2018ರ ರಾಜ್ಯ ವಿಧಾನಸಭೆ ಚುನಾವಣೆ ಹಾಗೂ ಐದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಮುಖಭಂU ಅನುಭವಿಸಿದ ನಂತರ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಮಾತು ಕೇಳಿಬರಲಾರಂಭಿಸಿದೆ.

ಈಗ ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕ ಯಾರು? ಎಂಬ ಯಕ್ಷ ಪ್ರಶ್ನೆ ಮೂಡಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ 20+ ಸ್ಥಾನಗಳಲ್ಲಿ ಜಯಗಳಿಸಬೇಕು ಎಂಬುದು ಹೈಕಮಾಂಡ್ ನೀಡಿರುವ ಟಾರ್ಗೆಟ್. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಪಡೆಯಬೇಕಾದರೆ ಕಾರ್ಯತಂತ್ರ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆ, ಕರ್ನಾಟಕ ವಿಧಾನಸಭೆ ಚುನಾವಣೆ 2018, ಜಯನಗರ ಮತ್ತು ರಾಜರಾಜೇಶ್ವರಿ ನಗರ ಚುನಾವಣೆ, ಐದು ಕ್ಷೇತ್ರಗಳ ಉಪಚುನಾವಣೆ ಹೀಗೆ ಬಿಜೆಪಿಗೆ ಪದೇ ಪದೇ ಹಿನ್ನಡೆಯಾಗಿದೆ.

ಬಿಜೆಪಿ ನಾಯಕರು ತಮ್ಮ ತಪ್ಪುಗಳಿಂದ ಪಾಠ ಕಲಿತಂತೆ ಕಾಣುತ್ತಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈಗಿರುವ ಸ್ಥಾನಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತಯೂ ಬಿಜೆಪಿ ಮುಂದಿದೆ. ಲೋಕಸಭೆ ಚುನಾವಣೆ ಎದುರಾಗಿರುವುದರಿಂದ ನಾಯಕತ್ವ ಬದಲಾವಣೆ ದೂರದ ಮಾತಾಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ 2018ರ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುವ ಪ್ರಯತ್ನ ವಿಫಲವಾಗಿದೆ. ಈಗ ಉಪ ಚುನಾವಣೆಯಲ್ಲಿ ಜಮಖಂಡಿ ಮತ್ತು ಬಳ್ಳಾರಿಯಲ್ಲಿ ಸೋಲಾಗಿದೆ. 2019ರ ಲೋಕಸಭಾ ಚುನಾವಣೆಯೊಳಗೆ ಬಿಜೆಪಿ ತನ್ನ ತಪ್ಪುಗಳನ್ನು ತಿದ್ದಿಕೊಂಡು ಮುಂದೆ ಸಾಗಿದರೆ ಹೆಚ್ಚಿನ ಸ್ಥಾನಗಳನ್ನುಗಳಿಸಬಹುದಾಗಿದೆ.

ಯಡಿಯೂರಪ್ಪ ನಾಯಕತ್ವ ಬದಲಾವಣೆ ಇಲ್ಲ
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಬದಲಾವಣೆ ಬಗ್ಗೆ ಚರ್ಚೆ ನಡೆಯಬಹುದು. ಆದರೆ, ಯಡಿಯೂರಪ್ಪ ಅವರಷ್ಟು ಪ್ರಭಾವ ಹೊಂದಿರುವ ನಾಯಕರು ಯಾರೂ ಇಲ್ಲ. ಆದ್ದರಿಂದ, ನಾಯಕತ್ವ ಬದಲಾವಣೆ ಸದ್ಯಕ್ಕೆ ಇಲ್ಲ. ಯಡಿಯೂರಪ್ಪ ಅವರನ್ನು ಉಳಿಸಿಕೊಳ್ಳುವ ಜೊತೆಗೆ ಹೊಸ ನಾಯಕರನ್ನು ರೂಪಿಸುವ ಜವಾಬ್ದಾರಿಯೂ ಪಕ್ಷದ ಮೇಲಿದೆ.

2018ರ ವಿಧಾನಸಭೆ ಚುನಾವಣೆಯಿಂದೀಚೆಗೆ ಬಿಜೆಪಿ, ಶ್ರೀರಾಮುಲು ಅವರನ್ನು ಪರ್ಯಾಯ ನಾಯಕ ಎಂದು ಬಿಂಬಿಸಲು ಪ್ರಯತ್ನ ನಡೆಸಿದೆ. ಆದರೆ, ಈ ಪ್ರಯತ್ನ ವಿಫಲವೂ ಆಗಿದೆ. ಈಗ ಬಳ್ಳಾರಿ ಉಪಚುನಾವಣೆ ಬಳಿಕ ಶ್ರೀರಾಮುಲು ಅವರ ಪ್ರಭಾವ ಮತ್ತಷ್ಟು ಕಡಿಮೆ ಆಗಿದೆ. ಆದ್ದರಿಂದ, ಬಿಜೆಪಿ ನಾಯಕತ್ವ ಬದಲಾವಣೆಗೆ ಸದ್ಯಕ್ಕೆ ಕೈ ಹಾಕುವುದಿಲ್ಲ.

2019ರ ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಬೇಕು ಎಂದರೆ ಯಡಿಯೂರಪ್ಪ ಅನಿವಾರ್ಯ. ಯಡಿಯೂರಪ್ಪ ಬದಲಾವಣೆಯಾದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳಿಗೆ ಬಿಜೆಪಿಯನ್ನು ಕಟ್ಟಿ ಹಾಕುವುದು ಸುಲಭವಾಗಲಿದೆ. ಈಗಾಗಲೇ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲಿದ್ದೇವೆ ಎಂದು ಮೈತ್ರಿ ಪಕ್ಷಗಳು ಘೋಷಣೆ ಮಾಡಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ