ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರ ಬಿಡುಗಡೆಗೂ ಮುನ್ನ ಸಾಕಷ್ಟು ನಿರೀಕ್ಷೆ ಉಂಟುಮಾಡಿದೆ. ಈ ನಡುವೆ ಟಾಲಿವುಡ್, ಕಾಲಿವುಡ್ ನಲ್ಲೂ ಕೆಜಿಎಫ್ ಚಿತ್ರ ಸದ್ದು ಮಾಡುತ್ತಿದ್ದು, ತಮಿಳು ಹಾಗೂ ತೆಲುಗು ವಿತರಕರು ಸಿನಿಮಾದ ಹಕ್ಕುಗಳನ್ನು ಪಡೆಯುವುದಕ್ಕೆ ಮುಗಿ ಬಿದ್ದಿದ್ದಾರೆ.
ಫರ್ಹಾನ್ ಅಖ್ತರ್ ಹಾಗೂ ರಿತೇಶ್ ಸಿಧ್ವಾನಿ ಅವರ ಎಕ್ಸೆಲ್ ಎಂಟರ್ಟೇನ್ಮೆಂಟ್ ಎಎ ಫಿಲ್ಮ್ಸ್ ಜಿತೆಗೂಡಿ ಕೆಜಿಎಫ್ ನ ಹಿಂದಿ ಆವೃತ್ತಿಗೆ ಹಕ್ಕುಗಳನ್ನು ಪಡೆದಿದ್ದರೆ, ದಕ್ಷಿಣ ಭಾರತದ ಸಿನಿಮಾ ಮಾರುಕಟ್ಟೆಯಲ್ಲೂ ಯಶ್ ಸಿನಿಮಾಗೆ ಬೇಡಿಕೆ ಜೋರಾಗಿಯೇ ಇದೆ.
ವಿಶಾಲ್ ಫಿಲ್ಮ್ ಫ್ಯಾಕ್ಟರಿ ತಮಿಳು ಹಕ್ಕುಗಳನ್ನು ಪಡೆದಿದ್ದರೆ, ತೆಲುಗುನಲ್ಲಿ ಸಿನಿಮಾ ಮಾಡಲು ವಾರಾಹಿ ಚಲನ ಚಿತ್ರಂ ಪ್ರೊಡಕ್ಷನ್ ಹೌಸ್ ಹಕ್ಕುಗಳನ್ನು ಖರೀದಿಸಿದೆ. ಆದರೆ ಎಷ್ಟು ಮೊತ್ತಕ್ಕೆ ಹಕ್ಕುಗಳು ಮಾರಾಟವಾಗಿವೆ ಎಂಬುದು ಈವರೆಗೂ ಬಹಿರಂಗವಾಗಿಲ್ಲ. ಕನ್ನಡದಲ್ಲಿ ಕೆಜಿಆರ್ ಸ್ಟುಡಿಯೋ ಹಾಗೂ ಸಹ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ವಿತರಣೆ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ.
5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡ ಚಿತ್ರ ಕೆಜಿಎಫ್ ಆಗಿದ್ದು, ಪ್ರಶಾಂತ್ ನೀಲ್ ನಿರ್ದೇಶನ ರವಿ ಬಸ್ರೂರ್ ಸಂಗೀತ, ಭುವನ್ ಗೌಡ ಸಿನಿಮೆಟೋಗ್ರಾಫಿ ಹೊಂದಿದೆ. ಬಹುನಿರೀಕ್ಷಿತ ಚಿತ್ರ ಡಿ.21 ಕ್ಕೆ ಬಿಡುಗಡೆಯಾಗಲಿದೆ.