ದೆಹಲಿಯಲ್ಲಿ ಲಾರಿಗಳ ಪ್ರವೇಶಕ್ಕೆ ಬಿತ್ತು ನಿರ್ಬಂಧ; ವಾಯುಮಾಲಿನ್ಯ ಕಡಿಮೆ ಮಾಡಲು ಹೊಸ ಕ್ರಮ

ನವದೆಹಲಿ: ವಾಹನ ಹಾಗೂ ಪಟಾಕಿ ಹೊಗೆಯಿಂದ ತತ್ತರಿಸಿ ಹೋಗಿರುವ ದೆಹಲಿಯನ್ನು ಸಮಸ್ಥಿತಿಗೆ ತರಲು ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಸರ್ಕಾರ ಹೊಸ ಕ್ರಮ ಕೈಗೊಂಡಿದ್ದು, ಲಾರಿಗಳು ನಗರ ಪ್ರವೇಶ ಮಾಡದಂತೆ ಮೂರು ದಿನಗಳ ನಿರ್ಬಂಧ ಹೇರಲಾಗಿದೆ.

ಗುರುವಾರ ರಾತ್ರಿ 11 ಗಂಟೆಯಿಂದಲೇ ಹೊಸ ನಿಯಮ ಜಾರಿಗೆ ಬಂದಿದ್ದು, ನ.11ವರೆಗೆ ಜಾರಿಯಲ್ಲಿರಲಿದೆ. ದೊಡ್ಡ ಹಾಗೂ ಮಧ್ಯಮ ಗಾತ್ರದ ಲಾರಿಗಳು ದೆಹಲಿ ಪ್ರವೇಶಿಸಬಾರದು ಎನ್ನುವ ಆದೇಶ ಹೊರಡಿಸಲಾಗಿದೆ. ಈ ಸಮಯದಲ್ಲಿ ಖಾಸಗಿ​ ವಾಹನಗಳ ಬಳಕೆ ಕಡಿಮೆ ಮಾಡುವಂತೆ ಜನಸಾಮಾನ್ಯರಲ್ಲಿ ಕೋರಲಾಗಿದೆ. ಅಗತ್ಯ ವಸ್ತುಗಳನ್ನು ಕೊಂಡೊಯ್ಯುವ ಹಾಗೂ ಪೆಟ್ರೋಲಿಯಂ ಲಾರಿಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.

‘ನಿತ್ಯ ಸುಮಾರು 50 ಸಾವಿರ ಲಾರಿಗಳು ದೆಹಲಿ ಪ್ರವೇಶ ಮಾಡುತ್ತವೆ. ಈ ನಿರ್ಬಂಧದಿಂದ ವಾಯುಮಾಲಿನ್ಯ ಕಡಿಮೆ ಆಗಲು ಸಹಕಾರಿಯಾಗಬಹುದು ಎನ್ನುವ  ವಿಶ್ವಾಸವಿದೆ’ ಎಂಬುದು ಅಧಿಕಾರಿಗಳ ಅಭಿಪ್ರಾಯ. ದೆಹಲಿ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಕೆಲವು ವಾರಗಳ ಹಿಂದೆಯಷ್ಟೇ ಸುಪ್ರೀಂಕೊರ್ಟ್ ದೀಪಾವಳಿಯಂದು​ ರಾತ್ರಿ 8 ಗಂಟೆಯಿಂದ 10 ಗಂಟೆಯರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಿತ್ತು. ಆದರೆ ಈ ನಿಯಮ ಮೀರಿ ಪಟಾಕಿ ಸಿಡಿಸಲಾಗಿತ್ತು ಎನ್ನಲಾಗಿದೆ. ದೀಪಾವಳಿಗೂ ಮೊದಲೇ ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿತ್ತು. ಈಗ ದೀಪಾವಳಿಯಲ್ಲಿ ಭಾರಿ ಪಟಾಕಿ ಸಿಡಿಸಿದ್ದರಿಂದ ವಾಯುಮಾಲಿನ್ಯ ಮಿತಿಮೀರಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ