ಸಿಎಸ್​ಡಿಎಸ್ ಸಮೀಕ್ಷೆ: ಉತ್ತರ ಭಾರತದ ಹಣಾಹಣಿಯಲ್ಲಿ ಬಿಜೆಪಿಗೆ 2-1 ಗೆಲುವು?

ಬೆಂಗಳೂರು: ಕರ್ನಾಟಕದ ಪಂಚ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದ ಭಾರತೀಯ ಜನತಾ ಪಕ್ಷಕ್ಕೆ ಉತ್ತರದಿಂದ ಸಿಹಿ ಸುದ್ದಿ ಸಿಗುವ ನಿರೀಕ್ಷೆ ಇದೆ. ಭಾರತದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಪೈಕಿ ಉತ್ತರ ಭಾರತದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್​ಗಡದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರ ಹಣಾಹಣಿಯಲ್ಲಿ ಕೇಸರಿಪಡೆ ರೋಚಕ ಗೆಲುವು ಸಾಧಿಸುವ ನಿರೀಕ್ಷೆ ಇದೆ. ಈ ಮೂರು ರಾಜ್ಯಗಳ ಪೈಕಿ ಎರಡನ್ನು ಬಿಜೆಪಿ ಉಳಿಸಿಕೊಳ್ಳಲಿದ್ದು, ಒಂದು ರಾಜ್ಯವು ಅದರ ಕೈತಪ್ಪಲಿದೆ. ಹಿಂದಿನ ಕೆಲ ಸಮೀಕ್ಷೆಗಳು ತಿಳಿಸಿದಂತೆ ರಾಜಸ್ಥಾನ ರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಬಹುದು ಎಂದು ಸಿಎನ್​ಡಿಎಸ್ ಚುನಾವಣೆಪೂರ್ವ ಸಮೀಕ್ಷೆಯಿಂದ ಗೊತ್ತಾಗಿದೆ. ಆದರೆ, ಮಧ್ಯಪ್ರದೇಶ ಮತ್ತು ಛತ್ತೀಸ್​ಗಡ ರಾಜ್ಯಗಳಲ್ಲಿ ಬಿಜೆಪಿ ಸತತ 4ನೇ ಬಾರಿ ವಿಕ್ರಮ ಸಾಧಿಸುವ ಸಾಧ್ಯತೆ ಇದೆ ಎಂದು ಈ ಸಮೀಕ್ಷೆ ಅಂದಾಜಿಸಿದೆ.

ಛತ್ತೀಸ್​ಗಡದಲ್ಲಿ ರಮಣ್ ಸಿಂಗ್ ನೇತೃತ್ವದ ಬಿಜೆಪಿ ನಿರೀಕ್ಷೆಮೀರಿ ಸುಲಭ ಗೆಲುವು ಸಾಧಿಸಲಿದೆ. ಆದರೆ, ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸರಳ ಬಹುಮತಕ್ಕೆ ತೃಪ್ತಿಪಡಬೇಕಾಗಬಹುದು ಎಂದು ಸಿಎನ್​ಡಿಎಸ್ ಸಂಸ್ಥೆ ಅಭಿಪ್ರಾಯಪಟ್ಟಿದೆ. ಆದರೆ, ರಾಜಸ್ಥಾನ ರಾಜ್ಯದಲ್ಲಿ ಬಿಜೆಪಿಯನ್ನು ಕಾಂಗ್ರೆಸ್ ಸೋಲಿಸುವುದು ನಿಶ್ಚಿತ ಎಂದು ಈ ಸಮೀಕ್ಷೆಯೂ ಹೇಳುತ್ತಿದೆ. ವಸುಂಧರಾ ರಾಜೇ ಸಿಂಧ್ಯ ನೇತೃತ್ವದ ಬಿಜೆಪಿಯು ಜನಾದೇಶವನ್ನು ಕಳೆದುಕೊಳ್ಳುವುದು ಬಹುತೇಕ ಖಚಿತವೆನ್ನಲಾಗಿದೆ.

ಸಿಎನ್ಡಿಎಸ್ ಚುನಾವಣಾ ಸಮೀಕ್ಷೆ:
ರಾಜಸ್ಥಾನ ವಿಧಾನಸಭಾ ಚುನಾವಣೆ:
ಒಟ್ಟು ಕ್ಷೇತ್ರಗಳು: 200
ಬಹುಮತಕ್ಕೆ: 101

ಬಿಜೆಪಿ: 84
ಕಾಂಗ್ರೆಸ್: 110
ಇತರೆ: 6

ಮಧ್ಯಪ್ರದೇಶ ವಿಧಾನಸಭಾ ಚುನಾವಣೆ:
ಒಟ್ಟು ಕ್ಷೇತ್ರಗಳು: 230
ಬಹುಮತಕ್ಕೆ: 116
ಬಿಜೆಪಿ: 116
ಕಾಂಗ್ರೆಸ್: 105
ಇತರೆ: 9

ಛತ್ತೀಸ್ಗಡ ವಿಧಾನಸಭಾ ಚುನಾವಣೆ:
ಒಟ್ಟು ಕ್ಷೇತ್ರಗಳು: 90
ಬಹುಮತಕ್ಕೆ: 46
ಬಿಜೆಪಿ: 56
ಕಾಂಗ್ರೆಸ್: 25
ಇತರೆ: 4

ಸಿವೋಟರ್ ಸಂಸ್ಥೆ ಆಗಸ್ಟ್​​ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ಎಲ್ಲಾ 3 ರಾಜ್ಯಗಳು ಬಿಜೆಪಿಯ ಕೈತಪ್ಪಿ ಕಾಂಗ್ರೆಸ್ ಪಾಲಾಗಲಿವೆ ಎನ್ನಲಾಗಿತ್ತು. ರಾಜಸ್ಥಾನ ವಿಚಾರದಲ್ಲಿ ಈವರೆಗೆ ನಡೆದ ಎಲ್ಲಾ ಸಮೀಕ್ಷೆಗಳಲ್ಲೂ ಕಾಂಗ್ರೆಸ್ ಗೆಲುವಿನ ಸೂಚನೆಯೇ ಸಿಕ್ಕಿದೆ. ಮಧ್ಯಪ್ರದೇಶ ಮತ್ತು ಛತ್ತೀಸ್​ಗಡ ವಿಚಾರದಲ್ಲಿ ಸಮೀಕ್ಷೆಗಳ ನಡುವೆ ವ್ಯತ್ಯಾಸವಾಗುತ್ತಿದೆ. ಇವತ್ತು ಸಿಎನ್​ಎಕ್ಸ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಮಧ್ಯಪ್ರದೇಶ ರಾಜ್ಯದಲ್ಲಿ ಬಿಜೆಪಿ 122 ಸ್ಥಾನ ಪಡೆದು ಅಧಿಕಾರ ರಚಿಸಬಹುದು ಎಂದು ಹೇಳಲಾಗಿದೆ. ಆದರೆ, ಕಳೆದ ತಿಂಗಳು ಇದೇ ಸಿಎನ್​ಎಕ್ಸ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿ 128 ಸ್ಥಾನಗಳನ್ನು ಗೆಲ್ಲಬಹುದು ಎಂಬ ಸೂಚನೆ ಇತ್ತು. ಕಳೆದ ಬಾರಿಯ ಚುನಾವಣೆಯಲ್ಲಿ ಗೆದ್ದಿದ್ದ 166 ಸ್ಥಾನಗಳ ಮಟ್ಟ ತಲುಪಲು ಬಿಜೆಪಿಗೆ ಸಾಧ್ಯವಾಗುವುದಿಲ್ಲ ಎನ್ನುವ ಕುರುಹಂತೂ ಇದೆ.

ಈ ಸಮೀಕ್ಷೆಯಲ್ಲಿ ವ್ಯಕ್ತವಾದ ಮತ್ತೊಂದು ಮಹತ್ವದ ವಿಚಾರವೆಂದರೆ ಈ ಮೂರೂ ರಾಜ್ಯಗಳಲ್ಲಿ ನರೇಂದ್ರ ಮೋದಿಯ ಜನಪ್ರಿಯತೆಯನ್ನು ಕುಂದಿಸಲು ರಾಹುಲ್ ಗಾಂಧಿ ಅವರಿಂದ ಸಾಧ್ಯವಾಗಿಲ್ಲ. ಇದು ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಬಹಳ ಮಹತ್ವದ ಅಂಶವಾಗಬಹುದು. ದೇಶದ ಅಭಿವೃದ್ಧಿಯಾಗಿಲ್ಲ ಎಂದು ಕೇಂದ್ರ ವಿಪಕ್ಷಗಳು ಮೋದಿ ಸರಕಾರವನ್ನು ಹರಿಹಾಯುತ್ತಿದ್ದರೂ ಮೋದಿಯ ವರ್ಚಸ್ಸು ಅಷ್ಟೇನೂ ಕಡಿಮೆಯಾಗಿಲ್ಲವೆನ್ನಲಾಗಿದೆ.

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಡ, ತೆಲಂಗಾಣ ಮತ್ತು ಮಿಝೋರಾಂ ರಾಜ್ಯಗಳಲ್ಲಿ ನವೆಂಬರ್ 12ರಿಂದ ಡಿಸೆಂಬರ್ 7ರವರೆಗೆ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಡಿಸೆಂಬರ್ 11ಕ್ಕೆ ಮತ ಎಣಿಕೆ ಆಗಲಿದೆ. ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ, ಛತ್ತೀಸ್​ಗಡ ಮತ್ತು ರಾಜಸ್ಥಾನ ರಾಜ್ಯಗಳ ಫಲಿತಾಂಶದತ್ತ ಅನೇಕರ ಚಿತ್ತ ನೆಟ್ಟಿರುವುದು ಸುಳ್ಳಲ್ಲ. ಮುಂಬರುವ ಲೋಕಸಭಾ ಚುನಾವಣೆಗೆ ಈ ಮೂರು ರಾಜ್ಯಗಳ ಫಲಿತಾಂಶವು ದಿಕ್ಸೂಚಿಯಾಗುವ ನಿರೀಕ್ಷೆ ಇದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ