ಬೆಂಗಳೂರು, ನ.9- ಅರವತ್ತೈದನೆ ಅಖಿಲ ಭಾರತ ಸಹಕಾರ ಸಪ್ತಾಹ ಇದೇ 14ರಂದು ಬೀದರ್ನ ನೆಹರು ಕ್ರೀಡಾಂಗಣದಲ್ಲಿ ನಡೆಯಲಿದೆ.
ಗ್ರಾಮೀಣ ಸಮೃದ್ಧಿಗಾಗಿ ಸಹಕಾರ ಸಂಸ್ಥೆಗಳ ಮೂಲಕ ಉತ್ತಮ ಆಡಳಿತ ಮತ್ತು ಸರ್ವರನ್ನೊಳಗೊಂಡ ಬೆಳವಣಿಗೆಗೆ ಪೂರಕವಾಗುವಂತೆ ಸಹಕಾರ ಸಪ್ತಾಹವನ್ನು ಆಚರಿಸಲಾಗುತ್ತಿದ್ದು, ಅಂದು ಆರು ಮಂದಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಚಿವ ಬಂಡೆಪ್ಪ ಕಾಶಂಪೂರ್ ತಿಳಿಸಿದರು.
ಕಾರ್ಯಕ್ರಮವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಸಹಕಾರ ರತ್ನ ಪ್ರಶಸ್ತಿಯೊಂದಿಗೆ ನೀಡುವ ಚಿನ್ನದ ಪದಕ ಒಂದು ಲಕ್ಷ ಮೌಲ್ಯ ಉಳ್ಳದ್ದಾಗಿದೆ. ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿ ಸಲ್ಲುತ್ತದೆ ಎಂದರು.
ನ.14 ರಿಂದ ಒಂದು ವಾರದ ಕಾಲ ಸಹಕಾರ ಸಪ್ತಾಹ ನಡೆಯಲಿದ್ದು, ಸಹಕಾರ ಅಭಿವೃದ್ಧಿಯೇ ನಮ್ಮ ಗುರಿ. ಶೋಷಣೆ ರಹಿತ ಸಮಾಜ ನಿರ್ಮಾಣ ನಮ್ಮ ಪಣ ಎಂಬ ಉದ್ದೇಶದಿಂದ ಸಹಕಾರದಿಂದ ಸಂಬಂಧಗಳನ್ನು ಬೆಳೆಸೋಣ. ರಾಜ್ಯ ರಾಜ್ಯಗಳ ನಡುವೆ ಸಹಕಾರ ಸೃಷ್ಟಿಸೋಣ ಎಂದು ಹೇಳಿದರು.