ಬೆಂಗಳೂರು, ನ.9- ಎಚ್1ಎನ್1 ಸಾಮಾನ್ಯ ವೈರಲ್ ಜ್ವರವಾಗಿದ್ದು, ನಿರ್ದಿಷ್ಟ ತುರ್ತು ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಬೆಂಗಳೂರು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ತಿಳಿಸಿದರು.
ಕೆ.ಆರ್.ಪುರಂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೆಂಗಳೂರು ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಎಚ್1ಎನ್1 ಅರಿವು ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಚ್1ಎನ್1 ಸಾಮಾನ್ಯ ವೈರಲ್ ಜ್ವರ. ಇದನ್ನು ಗುಣಪಡಿಸಬಹುದು ಎಂದರು.
ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ಚಿಕಿತ್ಸೆ ನೀಡಿ ಔಷಧಿ ಕೊಡಲಾಗುತ್ತದೆ. ಜ್ವರ ಬಂದವರು ತಕ್ಷಣ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡು ಸೂಕ್ತ ಔಷಧಿ ಪಡೆಯಬೇಕೆಂದು ಸಲಹೆ ನೀಡಿದರು.
ಇದುವರೆಗೂ ಬೆಂಗಳೂರಿನಲ್ಲಿ 51 ಪ್ರಕರಣಗಳು ದಾಖಲಾಗಿವೆ. ಒಬ್ಬ ವ್ಯಕ್ತಿಗೆ ಪದೇ ಪದೇ ಜ್ವರ, ನೆಗಡಿ, ಕೆಮ್ಮು ಬಂದಲ್ಲಿ ಅವರು ತಕ್ಷಣ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಬೇಕು. ಅಲ್ಲಿ ಅವರಿಗೆ ಸೂಕ್ತ ಸಲಹೆ ಕೊಡಲಾಗುತ್ತದೆ ಎಂದು ಹೇಳಿದರು.
ಮನೆ ಸುತ್ತಮುತ್ತ ಪರಿಸರವನ್ನು ಕಾಪಾಡಿಕೊಳ್ಳಬೇಕು. ಮನೆಯಿಂದ ಹೊರಗೆ ಬಂದಾಗ ಬಿಸಿ ನೀರು ಕುಡಿಯಬೇಕು. ಎಲ್ಲೆಂದರಲ್ಲಿ ಉಗುಳಬಾರದು. ಒಂದು ವೇಳೆ 10ರಿಂದ 12 ದಿನಗಳ ಕಾಲ ಜ್ವರ, ಕೆಮ್ಮು ಕಾಡುತ್ತಲೇ ಎದ್ದರೆ ಅದು ಎಚ್1ಎನ್1 ಆಗಿರಬಹುದು. ಆದ್ದರಿಂದ ಯಾವುದೇ ರೀತಿಯ ಜ್ವರ ಬಂದರೂ ತಕ್ಷಣ ಚಿಕಿತ್ಸೆ ಪಡೆಯುವುದು ಸೂಕ್ತ. ಇಲ್ಲದಿದ್ದಲ್ಲಿ ಅದು ಮಾರಕವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.