ಟಿಪ್ಪು ಜಯಂತಿ ವಿರೋಧಿಸಿ ರಾಜ್ಯಾದ್ಯಂತ ಬಿಜೆಪಿ ಭಾರೀ ಪ್ರತಿಭಟನೆ

ಬೆಂಗಳೂರು: ವಿರೋಧದ ನಡುವೆಯೂ ನಾಳೆ ಟಿಪ್ಪು ಜಯಂತಿ ಆಚರಿಸಲು ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ.

ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿರುತ್ತಿರುವ ಬಿಜೆಪಿ ಮೈತ್ರಿ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದೆ.  ಟಿಪ್ಪು ಜಯಂತಿಯನ್ನು ಕೇವಲ ಬಿಜೆಪಿ ಮಾತ್ರವಲ್ಲ ಕನ್ನಡಪರ ಸಂಘಟನೆಗಳೂ ವಿರೋಧಿಸುತ್ತಿವೆ.  ಕನ್ನಡ ಲಿಪಿಯಲ್ಲಿದ್ದ ಸಾಹಿತ್ಯವನ್ನು ಸುಟ್ಟು ಹಾಕಿ ಪಾರ್ಸಿ ಭಾಷೆಯನ್ನು ಹೇರಿದವನು ಟಿಪ್ಪು ಸುಲ್ತಾನ್ ಆತನ ಜಯಂತಿ ಆಚರಣೆಗೆ ನಮ್ಮ ವಿರೋಧವಿದೆ ಎಂದು ಬಿಜೆಪಿ ಕಾರ್ಯದರ್ಶಿ ರವಿಕುಮಾರ್​ ತಿಳಿಸಿದರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳದೇ ಇರುವುದನ್ನು ನಾವು ಸ್ವಾಗತಿಸುತ್ತೇನೆ. ಆದರೆ ವಿಶ್ರಾಂತಿಯ ನೆಪ ಹೇಳಿ, ವೈದ್ಯರ ಸಲಹೆ ನೆಪ ಹೇಳಿ ಕುಮಾರಸ್ವಾಮಿ ಓಡಿ ಹೋಗಿರುವುದು ನಾಚಿಕೆ ಗೇಡು ಎಂದು ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ಬಿ.ವೈ.ವಿಜಯೇಂದ್ರ, ಸಂಸದ ಪಿ.ಸಿ.ಮೋಹನ್, ಮಾಜಿ ಡಿಸಿಎಂ ಆರ್. ಅಶೋಕ್, ಎಂ.ಎಲ್.ಸಿ. ನಾರಾಯಣ ಸ್ವಾಮಿ ಬಿಬಿಎಂಪಿ ಸದಸ್ಯರು, ಬಿಜೆಪಿ ಮುಖಂಡರು ಭಾಗಿಯಾಗಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಪೊಲೀಸರೊಂದಿಗೆ ವಾಗ್ದಾದಕ್ಕಿಳಿದ ಬಿಜೆಪಿ ಕಾರ್ಯಕರ್ತರು
ನೆಲಮಂಗಲದಲ್ಲಿ  ಟಿಪ್ಪು ಜಯಂತಿ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಹಾಗೂ ಆರ್‌‌ಎಸ್‌‌‌ಎಸ್ ಕಾರ್ಯಕರ್ತರು ಪ್ರತಿಭಟನೆ ವೇಳೆ ಟೈಯರ್‌ಗೆ ಬೆಂಕಿ ಹಚ್ಚಲು ಪ್ರತಿಭಟನಾಕಾರರು ಮುಂದಾದರು. ಈ ವೇಳೆ ಅವರನ್ನು ತಡೆಯಲು ಮುಂದಾದ ಪೊಲೀಸರೊಂದಿಗೆ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ
ಪ್ರತಿ ವರ್ಷ ವಿರೋಧ ಮಾಡಿದರು ಮತ್ತೆ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವುದು ಖಂಡನಾರ್ಹ. ಯಾವುದೇ  ಕಾರಣಕ್ಕೂ ಮೈತ್ರಿ ಸರ್ಕಾ ಈ ಆಚರಣೆಗೆ ಮುಂದಾಗಬಾರದು ಎಂದು ಹಿಂದು ಪರ ಸಂಘಟನೆಗಳು ನಗರದ ಕಂದಾಯ ಭವನದ ಎದುರು ಪ್ರತಿಭಟನೆ ನಡೆಸಿದರು.
ಚಿತ್ರದುರ್ಗ, ಮೈಸೂರು, ತುಮಕೂರು, ಕೊಡಗು, ಉತ್ತರ ಕನ್ನಡ, ರಾಯಚೂರು ಸೇರಿದಂತೆ ಅನೇಕ ಕಡೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಹಾಗೂ ಹಿಂದು ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ