ಬೆಂಗಳೂರು,ನ.9-ರಾಜ್ಯ ಉಪಚುನಾವಣೆ ಫಲಿತಾಂಶದ ಬೆನ್ನಲ್ಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಶಾಸಕ ಶ್ರೀರಾಮುಲುಗೆ ಕರೆ ಮಾಡಿ ದೆಹಲಿಗೆ ಕರೆದಿದ್ದಾರೆ.
ಹಾಗೆ ನೋಡಿದರೆ 2018ರ ರಾಜ್ಯ ವಿಧಾನಸಭಾ ಕ್ಷೇತ್ರದ ಚುನಾವಣೆಯ ಸಮಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಹೆಗಲು ಕೊಟ್ಟು ನಿಂತ ನಾಯಕರಲ್ಲಿ ಶ್ರೀರಾಮುಲು ಕೂಡ ಒಬ್ಬರು.
ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಕೊಪ್ಪಳ, ಗದಗ, ಹಾವೇರಿ, ರಾಯಚೂರು, ಕಲ್ಬುರ್ಗಿ, ಬೀದರ್, ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ಅನೇಕ ಜಿಲ್ಲೆಗಳ ಮೇಲೆ ಹಿಡಿತವಿರುವ ರಾಮುಲುರನ್ನು ಡಿಸಿಎಂ ಅಭ್ಯರ್ಥಿ ಎಂದೇ ಬಿಂಬಿಸಿ ಬಾಗಲಕೋಟೆಯ ಬದಾಮಿ ಮತ್ತು ಚಿತ್ರದುರ್ಗದ ಮೊಳಕಾಲ್ಮೂರು ಎರಡು ಕ್ಷೇತ್ರಗಳಿಂದ ಬಿಜೆಪಿ ಬಿ ಫಾರಂ ಕೊಟ್ಟು ಕಣಕ್ಕಿಳಿಸಿತ್ತು.
ಇನ್ನು ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ಬದಾಮಿಯಿಂದ ಪರಾಭವಗೊಂಡು, ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದಿಂದ ರಾಮುಲು ಆಯ್ಕೆಯಾಗಿ ಶಾಸಕರಾದರು.
ಇತ್ತ ಶಾಸಕರಾದ ಬಳಿಕ, ಬಳ್ಳಾರಿ ಸಂಸದನ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಮುಲು, ಅನಿರೀಕ್ಷಿತವಾಗಿ ಎದುರಾದ ಲೋಕಸಭಾ ಉಪ-ಚುನಾವಣೆಯಲ್ಲಿ ಅದೇ ಬಳ್ಳಾರಿ ಕ್ಷೇತ್ರದಿಂದ ಸಹೋದರಿ ಜೆ.ಶಾಂತಾ ಅವರನ್ನು ಅದೃಷ್ಟ ಪರೀಕ್ಷೆಗಿಳಿಸಿದರು.
ಅದರೆ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ವಿ.ಎಸ್.ಉಗ್ರಪ್ಪರ ಮುಂದೆ ಜೆ.ಶಾಂತ ಭಾರೀ ಅಂತರದಿಂದ ಸೋಲಬೇಕಾಯ್ತು.ಈ ಎಲ್ಲಾ ಬೆಳವಣಿಗೆಗಳು ನಡೆದ ಬಳಿಕವೂ ರಾಮುಲುಗೆ ಬಿಜೆಪಿ ಹೈಕಮಾಂಡ್ ದೆಹಲಿಗೆ ಬರುವಂತೆ ಆಹ್ವಾನ ನೀಡಿದೆ.
ಆಹ್ವಾನದ ಹಿಂದೆ ರಾಜಕೀಯ ತಂತ್ರ?
ಹೌದು, ಬಳ್ಳಾರಿ ಲೋಕಸಭಾ ಕ್ಷೇತ್ರ ಉಪ-ಚುನಾವಣೆಯಲ್ಲಿ ಕಾಂಗ್ರೆಸ್ ಮುಂದೆ ಮಂಕಾದ ಬಿಜೆಪಿ, ಕ್ಷೇತ್ರವನ್ನು ಕಾಂಗ್ರೆಸ್ಗೆ ಬಿಟ್ಟುಕೊಟ್ಟಿದೆ. ಇತ್ತ ಬಿಜೆಪಿಯಿಂದ ಸ್ಫರ್ಧಿಸಿದ್ದ ಶಾಂತಾ ಭಾರೀ ಅಂತರದಿಂದ ಪರಾಭವಗೊಂಡಿದ್ದು, ಬಿಜೆಪಿಗೆ ಮುಖಭಂಗವಾಗಿದೆ.
ಇನ್ನು ಐದಾರು ತಿಂಗಳಲ್ಲಿ 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಎದುರಾಗಲಿದ್ದು, ಈಗಿನಿಂದಲೇ ಪಕ್ಷ ಸಂಘಟನೆ ಅನಿವಾರ್ಯವಾಗಿದೆ. ಹೀಗಾಗಿ ರಾಮುಲುರನ್ನು ಬಿಜೆಪಿಯಲ್ಲಿ ಕಡೆಗಾಣಿಸದೆ ಬಹಳ ಎಚ್ಚರಿಕೆಯಿಂದ ನಡೆಸಿಕೊಳ್ಳಲು ಹೈಕಮಾಂಡ್ ನಾಯಕರು ತಂತ್ರ ರೂಪಿಸಿದ್ದಾರೆ.
2019ರ ಲೋಕಸಭಾ ಚುನಾವಣೆಗೆ ರಾಜ್ಯದ 28 ಕ್ಷೇತ್ರಗಳ ಪೈಕಿ, 22 ರಿಂದ 23 ಸ್ಥಾನಗಳನ್ನು ಬಿಜೆಪಿ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ.
ಒಂದು ಕಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಿ ಸಂಘಟನೆ ಮಾಡುವುದು ನಿಶ್ಚಿತವಾಗಿದೆ. ಅದರ ಜೊತೆಗೆ ರಾಮುಲು ಅವರನ್ನು ಕೂಡ ಯಡಿಯೂರಪ್ಪರ ಮಾದರಿಯಲ್ಲೇ ಬಳಸಿಕೊಳ್ಳಲು ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ.
ಈಗಾಗಲೇ ರಾಮುಲು ಅವರ ಶಕ್ತಿ ಸಾಮರ್ಥ್ಯವನ್ನು ಗಮನಿಸಿರುವ ಹೈಕಮಾಂಡ್ ನಾಯಕರು, ಮತಗಳ ಕ್ರೂಢೀಕರಣಕ್ಕೆ ಇವರೇ ಸರಿಯಾದ ವ್ಯಕ್ತಿ ಎಂಬುದನ್ನು ಗಮನಿಸಿದ್ದಾಗಿದೆ.
ಸುಮಾರು 11 ಜಿಲ್ಲೆಗಳ ಮೇಲೆ ಹಿಡಿತವಿರುವ ರಾಮುಲು ಅವರನ್ನು ಯಡಿಯೂರಪ್ಪರ ನಂತರದ ನಾಯಕ ಎಂದು ಬಿಂಬಿಸಿ, ಎದುರಾಗಲಿರುವ 2019ರ ಲೋಕಸಭಾ ಚುನಾವಣೆಗೆ ಬಳಸಿಕೊಳ್ಳಲು ರಾಷ್ಟ್ರೀಯ ನಾಯಕರು ಪ್ಲಾನ್ ಮಾಡಿದ್ದಾರೆ. ಹೀಗಾಗಿಯೇ ರಾಮುಲುಗೆ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಬುಲಾವ್ ನೀಡಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪ ನಂತರದ ಸ್ಥಾನ ರಾಮುಲುಗೆ?
ಈಗಾಗಲೇ ರಾಮುಲುರನ್ನು ಬಿಜೆಪಿ ರಾಜ್ಯ ನಾಯಕರ ಪಟ್ಟಿ ಸೇರಿಸಿದ್ದಾಗಿದೆ. ರಾಮುಲು ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿಸಿ, ರಾಜ್ಯ ನಾಯಕನಂತೆ ಬಿಂಬಿಸಿದ್ದಾಗಿದೆ. ಇಷ್ಟೆಲ್ಲಾ ಆದ ಬಳಿಕ, ಜಾತಿ ಸಮೀಕರಣ ಕೂಡ ಲೆಕ್ಕಾಚಾರ ಹಾಕಿ ರಾಮುಲುಗೆ ಯಡಿಯೂರಪ್ಪರ ನಂತರ ಸ್ಥಾನಮಾನ ಪಕ್ಷದಲ್ಲಿ ನೀಡಿದ್ರೆ, ರಾಜ್ಯ ಬಿಜೆಪಿಗೆ ಪ್ಲಸ್ ಆಗುತ್ತೆ ಎಂಬುದನ್ನು ಹೈಕಮಾಂಡ್ ನಾಯಕರು ಅರಿತಿದ್ದಾರೆ.
ರಾಮುಲು ಪರಿಶಿಷ್ಟ ಪಂಗಡದ ಒಳಗೆ ಬರುವ ವಾಲ್ಮೀಕಿ ಸಮುದಾಯದ ನಾಯಕ. ಬಿಜೆಪಿಯಲ್ಲಿ ಸದ್ಯ ವರ್ಚಸ್ಸಿರುವ ರಾಮುಲು ಅವರ ವಾಲ್ಮೀಕಿ ಸಮುದಾಯದವನ್ನೇ ಅಸ್ತ್ರವಾಗಿ ಬಳಸಿಕೊಂಡರೆ ರಾಜ್ಯ ಬಿಜೆಪಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.
2019ರ ಲೋಕಸಭಾ ಕ್ಷೇತ್ರದ ಚುನಾವಣೆಗೆ ರಾಜ್ಯದ ಕೆಲ ಕ್ಷೇತ್ರಗಳ ಉಸ್ತುವಾರಿಯನ್ನು ಶ್ರೀ ರಾಮುಲು ಹೆಗಲಿಗೆ ವಹಿಸಲು ಅಮಿತ್ ಶಾ ರಣತಂತ್ರ ರೂಪಿಸಿದ್ದಾರೆ ಎಂದು ತಿಳಿದುಬಂದಿದೆ.