ಬಳ್ಳಾರಿ: ಆಂಬಿಡೆಂಟ್ ಮಾರ್ಕೆಟಿಂಗ್ ಪ್ರೈ.ಲಿ. ಕಂಪನಿ ಮಾಲೀಕ ಸೈಯದ್ ಅಹಮದ್ ಫರೀದ್ನನ್ನು ವಂಚನೆ ಪ್ರಕರಣದಿಂದ ರಕ್ಷಿಸುವುದಕ್ಕಾಗಿ ಜನಾರ್ದನ ರೆಡ್ಡಿ ಚಿನ್ನದ ರೂಪದಲ್ಲಿ ಹಣ ಪಡೆದಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ರೆಡ್ಡಿ ನಿವಾಸದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಮಂಜುನಾಥ ಚೌಧರಿ ನೇತೃತ್ವದ ಸಿಸಿಬಿ ಪೊಲೀಸ್ ಅಧಿಕಾರಿಗಳು ಬೆಂಗಳೂರಿನಿಂದ ಎರಡು ವಾಹನಗಳಲ್ಲಿ ಬಂದಿದ್ದು, ನಗರದ ಅವಂಬಾವಿಯ ಮಾಜಿ ಸಚಿವ ರೆಡ್ಡಿಯ ನಿವಾಸದ ಮೇಲೆ ದಾಳಿ ನಡೆಸಿ, ಭಾರೀ ಶೋಧ ನಡೆಸುತ್ತಿದ್ದಾರೆ.ಈಗಾಗಲೇ ರೆಡ್ಡಿ ಮಾವ ಪರಮೇಶ್ವರ ರೆಡ್ಡಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ದಾಳಿ ವೇಳೆ ಸಿಸಿಬಿ ಪೊಲೀಸರು, ಶೋಧ ಕಾರ್ಯದ ಸಂಪೂರ್ಣ ವಿಡಿಯೋ ಮಾಡಿದ್ದಾರೆ. ರೆಡ್ಡಿಯವರ ಮನೆ ಮಹಡಿ ಮೇಲೆ ತೆರಳಿ ಪ್ರಾಂಗಣ ಹಾಗೂ ಹೊರಾಂಗಣದ ದೃಶ್ಯಗಳನ್ನು ಮೊಬೈಲ್ನಲ್ಲಿ ಸಂಪೂರ್ಣವಾಗಿ ಸೆರೆ ಹಿಡಿದಿದ್ದಾರೆ.
ಜನಾರ್ಧನ ರೆಡ್ಡಿ ನಿವಾಸದ ಮೇಲೆ ದಾಳಿ ಸುದ್ದಿ ತಿಳಿಯುತ್ತಿದ್ದಂತೆ ರಾಯದುರ್ಗಂ ಮಾಜಿ ಶಾಸಕ ಕಾಪು ರಾಮಚಂದ್ರರೆಡ್ಡಿ ನಿವಾಸಕ್ಕೆ ಆಗಮಿಸಿದ್ದಾರೆ. ಅಲ್ಲದೆ ರೆಡ್ಡಿ ಆಪ್ತ ಸ್ನೇಹಿತ ಶಾಸಕ ಶ್ರೀರಾಮುಲು ಕೂಡ ಅವಂಬಾವಿ ನಿವಾಸಕ್ಕೆ ಆಗಮಿಸಿದ್ದಾರೆ.
ಈ ನಡುವೆ ಸಿಸಿಬಿ ಅಧಿಕಾರಿಗಳ ವಿಚಾರಣೆ ವೇಳೆ ಜನಾರ್ದನ ರೆಡ್ಡಿ ಅವರ ಅತ್ತೆ ನಾಗಲಕ್ಷ್ಮಮ್ಮ ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ. ಹಬ್ಬ, ಹರಿದಿನ, ಮದುವೆ ಸಮಾರಂಭದ ವೇಳೆ ನಮ್ಮವರ ಮನೆ ಮೇಲೆ ದಾಳಿ ಮಾಡುತ್ತೀರಿ ಎಂದು ಸಿಸಿಬಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆಂದು ಹೇಳಲಾಗಿದೆ.
Janardhan reddy,CCB Raid, Bellary