ಬೆಂಗಳೂರು,ನ.7- ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಸಮರದಲ್ಲಿ ಪರಾಭವಗೊಂಡಿದ್ದರೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಮಧುಬಂಗಾರಪ್ಪ ನವರಿಗೆ ಮಂತ್ರಿ ಸ್ಥಾನ ಸಿಗುವ ಸಂಭವವಿದೆ.
ಶಿವಮೊಗ್ಗದಲ್ಲಿ ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಮಧುಬಂಗಾರಪ್ಪ ನಿರೀಕ್ಷೆಗೂ ಮೀರಿದ ಮತ ಪಡೆದಿದ್ದರು. ಒಂದು ರೀತಿಯಲ್ಲಿ ಇದು ಸೋಲಿನಲ್ಲೂ ಗೆಲುವು ಎಂದೇ ಹೇಳಲಾಗುತ್ತಿದೆ.
ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 7 ಸ್ಥಾನಗಳನ್ನು ಗಳಿಸಿಕೊಂಡಿತ್ತು. ಸಹಜವಾಗಿ ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ.ರಾಘವೇಂದ್ರ ಭಾರೀ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ರಾಜಕೀಯ ವಲಯಗಳಲ್ಲಿ ಹರಿದಾಡತ್ತಿದ್ದವು.
ಆದರೆ ನಿನ್ನೆ ಪ್ರಕಟಗೊಂಡ ಉಪಚುನಾವಣೆಯ ಫಲಿತಾಂಶ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿದ ಮಧುಬಂಗಾರಪ್ಪ ಬಿಜೆಪಿಗೆ ಭಾರೀ ಸ್ಪರ್ಧೆವೊಡ್ಡುವುದರಲ್ಲಿ ಯಶಸ್ವಿಯಾಗಿದ್ದಾರೆ.
ಈಗ ಶಿವಮೊಗ್ಗ ಕ್ಷೇತ್ರದಲ್ಲಿ ತನ್ನ ನೆಲೆಯನ್ನು ವಿಸ್ತರಿಸಲು ಮುಂದಾಗಿರುವ ಜೆಡಿಎಸ್ ಮಧುಬಂಗಾರಪ್ಪನವರಿಗೆ ಸಂಪುಟದಲ್ಲಿ ಸ್ಥಾನ ನೀಡುವುದರ ಮೂಲಕ ಭಾರೀ ಲೆಕ್ಕಾಚಾರವನ್ನು ಹಾಕಿದೆ.
ಈಗಿರುವ ಲೆಕ್ಕಾಚಾರದಂತೆ ಜೆಡಿಎಸ್ ಒಂದು ಸ್ಥಾನವನ್ನು ವಿಧಾನಪರಿಷತ್ಗೆ ನಾಮನಿರ್ದೇಶನ ಮಾಡಬಹುದು. ಈ ಸ್ಥಾನಕ್ಕೆ ಜೆಡಿಎಸ್ನಲ್ಲಿ ಹಲವು ಹೆಸರುಗಳು ಕೇಳಿಬಂದಿವೆಯಾದರೂ ಪಕ್ಷದ ವರಿಷ್ಠರೂ ಆಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಧುಬಂಗಾರಪ್ಪನವರ ಬಗ್ಗೆ ವಿಶೇಷವಾದ ಒಲವು ಹೊಂದಿದ್ದಾರೆ.
ಶಿವಮೊಗ್ಗದಿಂದ ಸ್ಪರ್ಧಿಸಲು ಕೆಲವರು ಹಿಂದೇಟು ಹಾಕಿದರೂ ಮಧು ಮಾತ್ರ ವಿದೇಶಿ ಪ್ರವಾಸವನ್ನು ಮೊಟಕುಗೊಳಿಸಿ ಜೆಡಿಎಸ್ ವರಿಷ್ಠರ ಸೂಚನೆಯಂತೆ ನಾಮಪತ್ರ ಸಲ್ಲಿಸಿ ತಾನು ಪಕ್ಷದ ಶಿಸ್ತಿನ ಸಿಪಾಯಿ ಎಂಬುದನ್ನು ರುಜುವಾತು ಮಾಡಿದರು.
ಉಪಸಮರದಲ್ಲಿ ಪರಾಭವಗೊಂಡಿದ್ದರೂ ಮಧುಬಂಗಾರಪ್ಪನವರಿಗೆ ಮಂತ್ರಿ ಸ್ಥಾನ ನೀಡಿ ಶಿವಮೊಗ್ಗದಲ್ಲಿ ಪಕ್ಷ ಸಂಘಟನೆಯ ಹೊಣೆಗಾರಿಕೆಯನ್ನು ನೀಡಲು ಜೆಡಿಎಸ್ ತೀರ್ಮಾನಿಸಿದೆ.
2019ರ ಲೋಕಸಭಾ ಚುನಾವಣೆಗೆ ಶಿವಮೊಗ್ಗ ಲೋಕಸಭೆಯಿಂದ ಮಧುಬಂಗಾರಪ್ಪನವರನ್ನೇ ದೋಸ್ತಿ ಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಜೆಡಿಎಸ್ ತೀರ್ಮಾನಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಶಿವಮೊಗ್ಗದಲ್ಲಿ ಯಡಿಯೂರಪ್ಪನವರ ಪ್ರಾಬಲ್ಯವನ್ನು ಹತ್ತಿಕ್ಕಲು ಮಧುಬಂಗಾರಪ್ಪ ಸೂಕ್ತ ಎಂಬುದು ಜೆಡಿಎಸ್ಗೂ ಮನವರಿಕೆಯಾಗಿದೆ. ಅಲ್ಲದೆ ಮಧುಬಂಗಾರಪ್ಪನಿಗೆ ಮಂತ್ರಿ ಸ್ಥಾನ ನೀಡಿದರೆ ಜಿಲ್ಲೆಯಲ್ಲಿರುವ ಈಡಿಗ ಸಮುದಾಯವನ್ನು ಓಲೈಸಿಕೊಳ್ಳಬಹುದೆಂಬ ಲೆಕ್ಕಾಚಾರವೂ ಇದರಲ್ಲಿ ಅಡಗಿದೆ.
ಈ ಉಪಚುನಾವಣೆಯಲ್ಲಿ ಅಹಿಂದ ಸಮುದಾಯದಿಂದ ದೋಸ್ತಿ ಪಕ್ಷಕ್ಕೆ ಹೆಚ್ಚಿನ ಮತಗಳು ಬಂದಿದ್ದವು. ಮಧುಬಂಗಾರಪ್ಪಗೆ ಮಂತ್ರಿಸ್ಥಾನ ನೀಡಿದರೆ ಶಿವಮೊಗ್ಗ ಮಾತ್ರವಲ್ಲದೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿ ಪಕ್ಷ ಸಂಘಟನೆಗೆ ಆನೆಬಲ ಬರಲಿದೆ ಎಂಬ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪನವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ವರಿಷ್ಠರು ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.