ಮಾದಕ ವಸ್ತು ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮ: ಹಗ್ಸ್ ನಾಟ್ ಡ್ರಗ್ಸ್ ಅರಿವು ಕಾರ್ಯಕ್ರಮ

ಬೆಂಗಳೂರು, ನ.6- ಮಾದಕ ವಸ್ತು ಬಳಕೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಹೆಲ್ಪಿಂಗ್ ಹಾಟ್ರ್ಸ್ ಸಂಸ್ಥೆಯು ಹಗ್ಸ್ ನಾಟ್ ಡ್ರಗ್ಸ್ ಎಂಬ ಕಾರ್ಯಕ್ರಮದಡಿ ವಿದ್ಯಾಮಂದಿರ ಶಾಲಾ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿತು.

ಈ ಸಂಸ್ಥೆಯು ಸಮಾಜದ ದುರ್ಬಲ ವರ್ಗಗಳಿಗೆ ಪೌಷ್ಠಿಕತೆ, ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ, ಮಹಿಳಾ ಸಬಲೀಕರಣ, ಮಕ್ಕಳ ಆರೈಕೆ, ವೃದ್ಧಾಪ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಬೆಂಬಲ ನೀಡುವ ಗುರಿ ಹೊಂದಿದೆ.

ಈ ಉಪಕ್ರಮದೊಂದಿಗೆ ಕಾಲೇಜು ಮತ್ತು ಶಾಲಾ ಮಕ್ಕಳಲ್ಲಿ ಮಾದಕ ದ್ರವ್ಯಗಳ ಬಳಕೆಯನ್ನು ನಿವಾರಿಸುವ ಉದ್ದೇಶದಿಂದ ಮಾದಕ ದ್ರವ್ಯ ವಿರೋಧಿ ಅಭಿಯಾನ ಹಗ್ಸ್ ನಾಟ್ ಡ್ರಗ್ಸ್ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮಾದಕ ದ್ರವ್ಯಗಳ ಬಳಕೆಯಿಂದ ಉಂಟಾಗುವ ಅಡ್ಡ ಪರಿಣಾಮಗಳ ಕುರಿತು ಅರಿವು ಮೂಡಿಸುತ್ತಿದೆ.

ಪ್ರತಿ ವಿದ್ಯಾರ್ಥಿಯೂ ಜೀವನದ ಒಳ್ಳೆಯ ಅಂಶಗಳ ಕುರಿತು ಚಿಕ್ಕ ವಯಸ್ಸಿನಲ್ಲೇ ಅರಿವು ಹೊಂದುವುದನ್ನು ದೃಢೀಕರಿಸಲು ಜಿ ಗ್ರೂಪ್‍ನ ಸಿಎಸ್‍ಆರ್ ಅಂಗವಾದ ಹೆಲ್ಪಿಂಗ್ ಹಾಟ್ರ್ಸ್ ಸಂಸ್ಥೆಯು ಒಂದು ಹೆಜ್ಜೆ ಮುಂದಿಟ್ಟಿದ್ದು, ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಬಳಕೆಯ ದೈಹಿಕ ಹಾನಿಗಳ ಕುರಿತು ಅರಿವು ಮೂಡಿಸುತ್ತಿರುವುದಲ್ಲದೆ ಅವರನ್ನು ಜೀವನ ಕೌಶಲ್ಯಗಳೊಂದಿಗೆ ಸನ್ನದ್ಧಗೊಳಿಸುತ್ತಿದೆ.ನಗರದ ವಿದ್ಯಾಮಂದಿರ್ ಶಾಲೆಗಳಲ್ಲಿ ಈ ಸಂಸ್ಥೆಯು ಸಂವಹನ ನಡೆಸಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.

ಕೆಸಿ ಜನರಲ್ ಆಸ್ಪತ್ರೆಯ ಗಿರೀಶ್‍ಕುಮಾರ್ ಎಂಬುವವರು ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆ ಮತ್ತು ಆರೋಗ್ಯದ ಮೇಲೆ ಅದರ ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು.

ಮಾದಕ ವಸ್ತುಗಳ ಚಟಕ್ಕೆ ಬಲಿಯಾದ ಕುಟುಂಬದ ಸದಸ್ಯರು ಹಾಗೂ ಮಿತ್ರರನ್ನು ಹೇಗೆ ಅವುಗಳಿಂದ ಮುಕ್ತಗೊಳಿಸಬೇಕು ಎಂಬುದರ ಕುರಿತು ವಿವರಿಸಿದರು.
ಶಾಸಕ ಅಶ್ವತ್ಥ ನಾರಾಯಣ್ ಮಾತನಾಡಿ, ಯಾವುದೇ ಮಾದಕ ವಸ್ತು ಉಂಟುಮಾಡುವ ಸಂಭವನೀಯ ಅಪಾಯ ಬರೀ ದೇಹಕ್ಕೆ ಮಾತ್ರವಲ್ಲದೆ ಮನಸ್ಸಿಗೂ ಉಂಟಾಗುತ್ತದೆ ಎಂಬುದನ್ನು ಎಲ್ಲ ವಯೋಮಾನದವರು ಗುರುತಿಸುವುದು ಅಗತ್ಯ ಎಂದರು.
ಈ ಸಂಸ್ಥೆಯ ತಂಡವು ಬಹಳಷ್ಟು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿತು. ವಿದ್ಯಾರ್ಥಿಗಳ ಉತ್ಸಾಹ ಮತ್ತು ಶಕ್ತಿಯನ್ನು ಗಮನಿಸಿದ ಸಂಸ್ಥೆಯ ಸದಸ್ಯರು ಈ ಉಪಕ್ರಮವನ್ನು ಇನ್ನೂ ಹೆಚ್ಚು ಶಾಲೆಗಳಿಗೆ ವಿಸ್ತರಿಸುವ ಹಾಗೂ ಮಕ್ಕಳಿಗೆ, ಸಮಾಜಕ್ಕೆ ಉತ್ತಮ ಭವಿಷ್ಯ ನಿರ್ಮಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ