ಜನಾರ್ದನರೆಡ್ಡಿ ಅಮಾನವೀಯ ನಡೆಗೆ ಬಳ್ಳಾರಿ ಜನತೆಯೇ ಶಾಪ ನೀಡಿದ್ದಾರೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನ.6- ಜನಾರ್ದನರೆಡ್ಡಿ ಅವರ ಅಮಾನವೀಯ ನಡೆಗೆ ಬಳ್ಳಾರಿ ಜನತೆಯೇ ಶಾಪ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಾರ್ದನರೆಡ್ಡಿಗೆ ತಿರುಗೇಟು ನೀಡಿದ್ದಾರೆ.

ಮಗನ ಸಾವಿನ ಬಗ್ಗೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಶಾಪದ ಹೇಳಿಕೆ ನೀಡಿದ್ದ ಜನಾರ್ದನರೆಡ್ಡಿಗೆ ಚುನಾವಣಾ ಫಲಿತಾಂಶದ ನಂತರ ಟ್ವಿಟ್‍ನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪನವರನ್ನು ಭಾರೀ ಬಹುಮತದಿಂದ ಗೆಲ್ಲಿಸುವ ಮೂಲಕ ರೆಡ್ಡಿ ಅವರಿಗೆ ಬಳ್ಳಾರಿಯ ಜನತೆಯೇ ಶಾಪ ನೀಡಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಬಳ್ಳಾರಿಯ ಜನತಾ ಜನಾರ್ಧನರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಸರಣಿ ಟ್ವಿಟ್ ಮಾಡಿರುವ ಸಿದ್ದರಾಮಯ್ಯ, ಬಳ್ಳಾರಿಯಲ್ಲಿ ನರಕ ಚತುರ್ದಶಿಯ ಅರ್ಥಪೂರ್ಣ ಆಚರಣೆ, ಕತ್ತಲೆಯಿಂದ ಬೆಳಕಿನೆಡೆಗೆ ಜನರ ಪಯಣ, ನಾಡ ಬಾಂಧವರಿಗೆ ದೀಪಾವಳಿಯ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜಯಗಳಿಸಿರುವ ಸಿದ್ದು ನ್ಯಾಮೇಗೌಡ ಅವರಿಗೆ ಅಭಿನಂದನೆ ಸಲ್ಲಿಸಿ ಪಕ್ಷದ ಜಯಕ್ಕಾಗಿ ಶ್ರಮಿಸಿದ ನಾಯಕರು ಹಾಗೂ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಪಕ್ಷದ ಅಭ್ಯರ್ಥಿಯನ್ನು ಆಶೀರ್ವದಿಸಿದ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಸಮನ್ವಯತೆಯೇ ಗೆಲುವಿಗೆ ಕಾರಣ ಎಂದು ಅವರು ಹೇಳಿದ್ದಾರೆ. ಎರಡೂ ಪಕ್ಷಗಳು ಸಮನ್ವಯತೆಯಿಂದ ಚುನಾವಣೆ ಎದುರಿಸಿದ್ದಕ್ಕೆ ಎರಡು ಲೋಕಸಭೆ, ಎರಡು ವಿಧಾನಸಭೆಯಲ್ಲಿ ಗೆಲ್ಲಲು ಸಾಧ್ಯವಾಯಿತು ಎಂದು ಅವರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ