ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಅನಿತಾ ಕುಮಾರಸ್ವಾಮಿ ಗೆಲುವು

ಬೆಂಗಳೂರು, ಸೆ.6-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಹಾಗೂ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಭಾರೀ ಬಹುಮತದ ಮೂಲಕ ಚುನಾಯಿತರಾಗಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ಚುನಾಯಿತರಾಗಿ ದಾಖಲೆ ಮಾಡಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿ ಆರಂಭದಿಂದಲೂ ನಿರಂತರವಾಗಿ ಮುನ್ನಡೆ ಕಾಯ್ದುಕೊಂಡು ಬಂದಿದ್ದರು.
ಅನಿತಾ ಕುಮಾರಸ್ವಾಮಿ ಜಯಭೇರಿ ಬಾರಿಸುವ ಮೂಲಕ ರಾಮನಗರ ಕ್ಷೇತ್ರವನ್ನು ಮತ್ತೆ ಉಳಿಸಿಕೊಂಡಿದ್ದಲ್ಲದೆ ಜೆಡಿಎಸ್‍ನ ಭದ್ರಕೋಟೆ ಎಂಬುದನ್ನು ಮತ್ತೊವೆÅ್ಮ ಸಾಬೀತುಪಡಿಸಿದೆ.

ಈ ಬಾರಿಯ ವಿಧಾನಸಭೆಯಲ್ಲಿ ಜೆಡಿಎಸ್‍ನ ಏಕೈಕ ಮಹಿಳಾ ಶಾಸಕಿಯೂ ಆಗಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿ ಚುನಾಯಿತರಾಗಿದ್ದರು. ನಂತರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲಿನ ಅನುಭವವನ್ನೂ ಪಡೆದಿದ್ದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರ, ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಚುನಾಯಿತರಾಗಿದ್ದರು. ಆದರೆ ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಂಡು ರಾಮನಗರ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣಾ ಆಯೋಗ ಉಪ ಚುನಾವಣೆ ನಡೆಸಿತು.

ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡು ರಾಮನಗರ ಕ್ಷೇತ್ರದಲ್ಲಿ ಉಭಯ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲಾಗಿತ್ತು. ಆದರೆ ವಿರೋಧ ಪಕ್ಷವಾದ ಬಿಜೆಪಿ, ಕಾಂಗ್ರೆಸ್ ಮುಖಂಡ ಎಲ್. ಚಂದ್ರಶೇಖರ್ ಅವರನ್ನು ಪಕ್ಷಕ್ಕೆ ಸೇರ್ಪಡೆಮಾಡಿಕೊಂಡು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು.
ಮತದಾನಕ್ಕೂ ಮುನ್ನ ಚಂದ್ರಶೇಖರ್ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದ್ದಲ್ಲದೆ ಕಾಂಗ್ರೆಸ್‍ಗೆ ಮರಳಿ ಗೊಂದಲ ಸೃಷ್ಟಿ ಮಾಡಿದ್ದರು. ಬಿಜೆಪಿಗೆ ದೊಡ್ಡ ಆಘಾತವನ್ನೇ ನೀಡಿದ್ದರು. ಹೀಗಾಗಿ ರಾಮನಗರ ಕ್ಷೇತ್ರದಲ್ಲಿ ತೀವ್ರ ಪ್ರತಿಸ್ಪರ್ಧೆ ಇಲ್ಲದಂತಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ