ರಾಜ್ಯದಲ್ಲಿ ಈ ಬಾರಿ 100 ತಾಲೂಕುಗಳು ಬರಪೀಡಿತ

ಬೆಂಗಳೂರು, ಸೆ.6- ರಾಜ್ಯದಲ್ಲಿ ಈ ಬಾರಿಯ ಮುಂಗಾರು ಉತ್ತಮವಾಗಿದ್ದರೂ ನೂರು ತಾಲೂಕುಗಳು ಬರಪೀಡಿತವಾಗಿವೆ. ಆದರೆ ಹಿಂಗಾರಿನ ಆರಂಭವೂ ಉತ್ತಮವಾಗಿರದೆ ಬರದ ಛಾಯೆ ಗೋಚರಿಸತೊಡಗಿದೆ.

ಅಕ್ಟೋಬರ್ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಿರುವುದಲ್ಲದೆ ಹಿಂಗಾರು ಆರಂಭದಲ್ಲೇ ದುರ್ಬಲವಾಗಿದೆ. ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಿದ್ದು, ಹಿಂಗಾರು ಹಂಗಾಮಿನ ಬೇಸಾಯಕ್ಕೆ ಈಗಾಗಲೇ ಸಾಕಷ್ಟು ತೊಂದರೆ ಉಂಟಾಗಿದೆ.
ಹವಾಮಾನ ಮುನ್ಸೂಚನೆ ಪ್ರಕಾರ, ರಾಜ್ಯದಲ್ಲಿ ಉತ್ತಮ ಪ್ರಮಾಣದ ಮಳೆಯಾಗುವ ಲಕ್ಷಣಗಳು ಇಲ್ಲ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

ಕಳೆದ ವಾರ ಉಂಟಾಗಿದ್ದ ಮೇಲ್ಮೈ ಸುಳಿಗಾಳಿಯಿಂದಲೂ ನಿರೀಕ್ಷಿತ ಪ್ರಮಾಣದಲ್ಲೂ ಮಳೆಯಾಗಿಲ್ಲ. ರಾಜ್ಯದ ಕೆಲವೆಡೆ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಿದ್ದನ್ನು ಹೊರತುಪಡಿಸಿದರೆ ಉತ್ತಮ ಮಳೆಯಾಗಿಲ್ಲ.
ಕಳೆದ ವರ್ಷ ಇದೇ ವೇಳೆಗೆ ರಾಜ್ಯದಲ್ಲಿ ಸುಮಾರು 23 ಲಕ್ಷ ಹೆಕ್ಟೇರ್ ಪ್ರದೇಶದಲಿ ಹಿಂಗಾರು ಬಿತ್ತನೆ ಮಾಡಲಾಗಿತ್ತು. ಈ ವರ್ಷ ಕೇವಲ 11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಉತ್ತಮ ಮಳೆಯಾಗುವ ಲಕ್ಷಣಗಳು ಇಲ್ಲದ ಕಾರಣ ಬಿತ್ತನೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಕಡಿಮೆಯಿದೆ. ಮುಂಗಾರು ಹಂಗಾಮಿನಲ್ಲಿ ಹೆಚ್ಚು ಬರದ ಛಾಯೆ ಉತ್ತರ ಕರ್ನಾಟಕ ಭಾಗದಲ್ಲಿ ಆವರಿಸಿದ್ದು, ಹಿಂಗಾರು ಮಳೆ ಕೈಕೊಟ್ಟರೆ ಈ ಭಾಗವೇ ಮತ್ತೆ ಬರದ ಛಾಯೆಗೆ ಸಿಲುಕಲಿದೆ.

ಸದ್ಯಕ್ಕೆ ಭಾರೀ ಮಳೆಯಾಗುವ ಮುನ್ಸೂಚನೆ ಇಲ್ಲ. ಶ್ರೀಲಂಕಾ ಬಳಿ ವಾಯುಭಾರ ಕುಸಿತ ಉಂಟಾಗುತ್ತಿದ್ದು, ಅದು ಚಂಡಮಾರುತವಾಗಿ ಪರಿವರ್ತನೆಯಾಗುವ ಸುಳಿವು ಇದೆ. ನವೆಂಬರ್ 10ರ ನಂತರ ತಮಿಳುನಾಡಿನ ಕರಾವಳಿ ಪ್ರವೇಶಿಸುವ ಸಾಧ್ಯತೆ ಇದೆ. ನವೆಂಬರ್ 12 ಮತ್ತು 13ರಂದು ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಹಗುರ ಮತ್ತು ಸಾಧಾರಣ ಮಳೆಯಾಗುವ ಮುನ್ಸೂಚನೆಗಳು ಮಾತ್ರ ಇದುವರೆಗೆ ಕಂಡುಬಂದಿದೆ.ನವೆಂಬರ್ 10ರ ನಂತರ ನಿರ್ದಿಷ್ಟ ಮುನ್ಸೂಚನೆಗಳು ಮಳೆಯ ಸಾಧ್ಯಾಸಾಧ್ಯತೆ ಬಗ್ಗೆ ತಿಳಿದುಬರಲಿದೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ