ಶ್ರೀನಗರ: ಇತ್ತೀಚೆಗೆ ಭಾರತೀಯ ಸೇನಾಪಡೆ ದೇಶದ ಗಡಿಯನ್ನು ದಾಟಿ ಒಳ ನುಸುಳುವ ಪಾಕ್ ಉಗ್ರರನ್ನು ಸದೆಬಡಿಯುವ ಮೂಲಕ ತಕ್ಕ ಪಾಠ ಕಲಿಸುತ್ತಿದೆ. ಇದರಿಂದ ಕೋಪಗೊಂಡಿರುವ ಪಾಕಿಸ್ಥಾನ ಸೈನಿಕರು ನೇಪಾಳದ ಕಡೆಯಿಂದ ಭಾರತದೊಳಗೆ ನುಸುಳಲು ಸಿದ್ಧತೆ ನಡೆಸುತ್ತಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಪಾಕಿಸ್ತಾನ ಸಲಹಲ್ಪಡುತ್ತಿರುವ ಉಗ್ರ ಸಂಘಟನೆಯಾದ ಲಷ್ಕರ್ -ಇ- ತೊಯ್ಬಾ ನೇಪಾಳದ ಕಠ್ಮಂಡುವಿನಲ್ಲಿ ಎನ್ಜಿಒ ಒಂದನ್ನು ಸ್ಥಾಪಿಸಿದೆ. ಈ ಸಂಸ್ಥೆಯ ಮೂಲಕ ಲಷ್ಕರ್-ಇ-ತೊಯ್ಬಾ ತನ್ನ ಕಾರ್ಯ ಸಾಧಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಈ ಕಾರಣದಿಂದಲೇ ಆ ಎನ್ಜಿಒಗೆ ಬೇಕಾದ ಎಲ್ಲ ಆರ್ಥಿಕ ನೆರವನ್ನೂ ಪಾಕಿಸ್ತಾನ ನೀಡುತ್ತಿದೆ ಎಂದು ತಿಳಿದುಬಂದಿದೆ.
ಕಠ್ಮಂಡುವಿನಲ್ಲಿ ಸ್ಥಾಪನೆಯಾಗಿರುವ ಎನ್ಜಿಒದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಕೂಡ ಲಷ್ಕರ್-ಇ-ತೊಯ್ಬಾ ಸಂಘಟನೆಯಲ್ಲಿ ತೊಡಗಿಸಿಕೊಂಡವರಾಗಿದ್ದಾರೆ. ಭಾರತ ಮತ್ತು ನೇಪಾಳದ ನಡುವೆ ಸಂಚಾರಕ್ಕೆ ಯಾವುದೇ ಅಡೆತಡೆಯಾಗಲಿ, ನಿರ್ಬಂಧವಾಗಲೀ ಇಲ್ಲದಿರುವುದರಿಂದ ಈ ಅವಕಾಶವನ್ನು ಬಳಸಿಕೊಳ್ಳಲು ಲಷ್ಕರ್ ಸಂಘಟನೆ ಮುಂದಾಗಿದೆ.
ಸದ್ಯಕ್ಕೆ ಭಾರತದ ಮೇಲೆ ದಾಳಿ ನಡೆಸಲು ನಾನಾ ಮಾರ್ಗಗಳನ್ನು ಹುಡುಕುತ್ತಿರುವ ಪಾಕಿಸ್ತಾನ ಬಾಂಗ್ಲಾದೇಶದಲ್ಲೂ ಭಾರತ ವಿರೋಧಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿದೆ. ಢಾಕಾದಲ್ಲಿರುವ ಪಾಕಿಸ್ತಾನದ ಹೈ ಕಮಿಷನ್ನ ಪಾಕ್ ರಾಯಭಾರಿ ಅಧಿಕಾರಿಗಳು ಇತ್ತೀಚೆಗೆ ಭಯೋತ್ಪಾದಕ ಸಂಘಟನೆಗಳ ಮುಖಂಡರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಆತ್ಮಹತ್ಯಾ ದಾಳಿಯ ತಂಡಕ್ಕೆ ಸೂಕ್ತ ತರಬೇತಿ ನೀಡಿ ಶತ್ರು ರಾಷ್ಟ್ರಗಳ ಮೇಲೆ ದಾಳಿ ನಡೆಸಲು ಕಳುಹಿಸಬೇಕೆಂದು ಹೇಳಲಾಗಿದೆ. ಸಭೆ ನಡೆದ ಬಳಿಕ, ಬಾಂಗ್ಲಾದೇಶಕ್ಕೆ ಈ ವಿಷಯ ಗೊತ್ತಾಗಿದ್ದು, ಅಲ್ಲಿನ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿತ್ತು.