ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಎಲ್ಲಾ ವಯೋಮಾನದ ,ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ನೀಡಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ತೀರ್ಪು ವಿರೋಧಿಸಿ ಹಾಗು ಮಹಿಳೆಯರ ಪ್ರವೇಶಕ್ಕೆ ಅಡ್ಡಿಪಡಿಸಿ ನಡೆಸುತ್ತಿರುವ ಪ್ರತಿಭಟನೆಗಳು ಯೋಜಿತ ಪ್ರತಿಭಟನೆಗಳಾಗಿವೆ ಎಂಬುದಕ್ಕೆ ಸ್ವತ: ಬಿಜೆಪಿ ನಾಯಕರೇ ಈಗ ಖುದ್ದಾಗಿ ಒಪ್ಪಿಗೆ ನೀಡಿದ್ದಾರೆ.
ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ವಿರೋಧ ಪ್ರತಿಭಟನೆ ಯೋಜಿತ ಮತ್ತು ಪಕ್ಷದ ಅಜೆಂಡಾ ಎಂದು ಕೇರಳ ಬಿಜೆಪಿ ಅಧ್ಯಕ್ಷ ಶ್ರೀಧರನ್ ಪಿಳ್ಳೈ ಯುವ ಮೋರ್ಚಾ ಸಭೆಯಲ್ಲಿ ಹೇಳಿದ್ದಾರೆ.
ಯುವ ಮೋರ್ಚಾ ಸಭೆಯಲ್ಲಿ ಮಾತನಾಡಿದ ಶ್ರೀಧರನ್ ಪಿಳ್ಳೈ ಅವರ ಆಡಿಯೋ ಬಹಿರಂಗವಾಗಿದ್ದು, 10ರಿಂದ 50 ವರ್ಷದ ಮಹಿಳೆಯರು ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರವೇಶಿಸದಂತೆ ತಡೆಯುವ ಬಗ್ಗೆ ದೇಗುಲದ ತಂತ್ರಿ ನನ್ನೊಂದಿಗೆ ಚರ್ಚಿಸಿದ್ದರು ಎಂದು ಹೇಳಿದ್ದಾರೆ. ಅಕ್ಟೋಬರ್ 17ರಿಂದ ಅಕ್ಟೋಬರ್ 22ರ ವರೆಗೆ ನಡೆದ ಪ್ರತಿಭಟನೆ ಯೋಜಿತ ಮತ್ತು ಅದನ್ನು ಕಾರ್ಯರೂಪಕ್ಕೆ ತಂದಿದ್ದು ಸ್ವತ: ಬಿಜೆಪಿ. ಈ ಸಂಬಂಧ ನಾವು ಒಂದು ಅಜೆಂಡಾವನ್ನು ಮಂಡಿಸಿದ್ದೇವು. ಅದನ್ನು ನಮ್ಮ ಕಾರ್ಯಕರ್ತರು ಒಪ್ಪಿಕೊಂಡರು ಎಂದು ಪಿಳೈ ಹೇಳಿದ್ದಾರೆ.
ಈ ನಿಟ್ಟಿನಲ್ಲಿ ನಿರ್ಧಿಷ್ಟ ಸ್ಥಳಗಳಲ್ಲಿ ಕ್ಯಾಂಪ್ ಮಾಡಲು ಇಬ್ಬರು ರಾಜ್ಯ ಪ್ರಧಾನ ಕಾರ್ಯದರ್ಶಿಗಳನ್ನು ನಿಯೋಜಿಸಲಾಗಿತ್ತು. ಅವರು ಯಶಸ್ವಿಯಾಗಿ ಈ ಪ್ರತಿಭಟನಾ ಕಾರ್ಯನಿರ್ವಹಿಸಿದ್ದಾರೆ. ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹಿಳೆಯರು ದೇವಾಲಯ ಪ್ರವೇಶಿಸುವ ಯತ್ನವನ್ನು ವಿಫಲಗೊಳಿಸಿದರು ಎಂದು ಶ್ರೀಧರನ್ ಪಿಳ್ಳೈ ಹೆಮ್ಮೆಯಿಂದ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ದೇವಾಲಯದ ಮುಖ್ಯ ಅರ್ಚಕ ಕಾಂತರಾರು ರಾಜೀವರು ನನಗೆ ದೂರವಾಣಿ ಮೂಲಕ ಕರೆಮಾಡಿ ಮಹಿಳೆಯರು ದೇವಸ್ಥಾನ ಪ್ರವೇಶಿಸಲು ಸಿದ್ಧರಾಗಿದ್ದಾರೆ. ಅವರಿಗೆ ಪ್ರವೇಶ ನಿರಾಕರಿಸಿದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದಿದ್ದರು. ಆದರೆ ಅದಕ್ಕೆ ಭಯಪಡುವ ಅಗತ್ಯವಿಲ್ಲ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ನಾನು ಅವರಿಗೆ ಭರವಸೆ ಕೊಟ್ಟಿದ್ದೆ ಎಂದು ಪಿಳ್ಳೈ ಹೇಳಿಕೆ ನೀಡಿದ್ದಾರೆ.
Kerala BJP,Sabarimala agitation,part of agenda