ಬೆಂಗಳೂರು,ನ.5-ಬೆಳಕಿನ ಹಬ್ಬ ದೀಪಾವಳಿಗೆ ನಾಡಿನ ಸಮಸ್ತ ಜನತೆಗೆ ಶುಭಾಶಯವನ್ನು ಕೋರಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪಟಾಕಿ ಸಿಡಿಸುವಾಗ ಅಗತ್ಯ ಸುರಕ್ಷಾ ಕ್ರಮಗಳನ್ನು ಅನುಸರಿಸುವಂತೆ ಮನವಿ ಮಾಡಿದರು.
ಪಟಾಕಿ ಸಿಡಿಸುವಾಗ ಯಾವುದೇ ತೊಂದರೆ, ಅವಘಡ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಬೇಕು. ಪಟಾಕಿ ಸಿಡಿಸಲು ಸುಪ್ರೀಂಕೋರ್ಟ್ ನೀಡಿರುವ ಮಾರ್ಗಸೂಚಿಯನ್ನು ಅನುಸರಿಸುವ ಮೂಲಕ ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ಸಲಹೆ ಮಾಡಿದರು.
ಸಾಧ್ಯವಾದಷ್ಟು ಪರಿಸರ ಮಾಲಿನ್ಯವನ್ನು ತಡೆಯುವಂತೆ ಕೋರಿರುವ ಮುಖ್ಯಮಂತ್ರಿಯವರು, ಬೆಳಕಿನ ಹಬ್ಬ ದೀಪಾವಳಿ ಮನೆ-ಮನಗಳಲ್ಲಿ ಬೆಳಕು ಮೂಡಿ ಸುಖ-ಶಾಂತಿ, ನೆಮ್ಮದಿಯನ್ನು ನೀಡಲಿ ಎಂದು ಹಾರೈಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.