ಬೆಳಕಿನ ಹಬ್ಬ ದೀಪಾವಳಿಗೆ ಇನ್ನೂ ಸಜ್ಜಾಗದ ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸ್ ಇಲಾಖೆ

ಬೆಂಗಳೂರು,ನ.5- ಬೆಳಕಿನ ಹಬ್ಬ ದೀಪಾವಳಿ ಈ ಬಾರಿ ವಿಶೇಷವಾಗಿ ಗಮನ ಸೆಳೆದಿದೆ. ಪಟಾಕಿ ಬಳಕೆಗೆ ನಿಷೇಧ, ಪಟಾಕಿಯಿಂದ ಮಾಲಿನ್ಯ ನಿಯಂತ್ರಣ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ.

ಪಟಾಕಿ ನಿಷೇಧ ಹಿನ್ನೆಲೆಯಲ್ಲಿ ಈ ಬಾರಿಯ ದೀಪಾವಳಿ ಹಬ್ಬ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ವಿಪರ್ಯಾಸವೆಂದರೆ ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸ್ ಇಲಾಖೆಗಳು ಮಾತ್ರ ಇನ್ನೂ ಸಜ್ಜಾಗಿಲ್ಲ. ಇದರ ಜವಾಬ್ದಾರಿ ಯಾರಿಗೆ ಎಂಬ ಬಗ್ಗೆ ಈವರೆಗೂ ಸಭೆ ಮಾಡಿಲ್ಲ.

ದೀಪಾವಳಿ ಹಬ್ಬದ ಸಡಗರಕ್ಕೆ 48 ಗಂಟೆ ಮಾತ್ರ ಬಾಕಿ ಇದೆ. ಮಾಲಿನ್ಯ ನಿಯಂತ್ರಣಕ್ಕಾಗಿ ಸುಪ್ರೀಂ ನೀಡಿರುವ ಆದೇಶ ಪಾಲನೆ ಆಗುತ್ತೊ ಇಲ್ಲವೋ ಅಂತ ಗಮನ ಹರಿಸುವವರು ಯಾರು. ನಿಗದಿತ ಸಮಯ ರಾತ್ರಿ 8 ರಿಂದ 10 ಗಂಟೆವರೆಗೂ ಮಾತ್ರ ಪಟಾಕಿ ಸಿಡಿಸಬೇಕು, ಮಾಲಿನ್ಯ ಉಂಟು ಮಾಡುವ ಪಟಾಕಿ ಬಳಸುವಂತಿಲ್ಲ. ಬಳಸಿದರೆ ದಂಡ ಎಷ್ಟು, ಜವಾಬ್ದಾರಿ ಯಾರಿಗೆ ಅಂತಲೇ ಮಾಹಿತಿ ಇಲ್ಲ. ಇನ್ನು ಪಟಾಕಿ ಮಾರಾಟಗಾರರಿಗಂತೂ ಹೇಳೊರಿಲ್ಲ, ಕೇಳೋರಿಲ್ಲ ಅನ್ನುವಂತಾಗಿದೆ.

ಈ ಕುರಿತು ನಾಳೆ ಎಲ್ಲಾ ಇಲಾಖೆಗಳು ಸೇರಿ ಚರ್ಚೆ ನಡೆಸುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಶನಿವಾರ ಹೊರಡಿಸಿರುವ ಸುತ್ತೋಲೆ ಪ್ರಕಾರ ಸ್ಥಳೀಯ ಪಾಲಿಕೆಗಳು ಸುಪ್ರೀಂ ಆದೇಶದತ್ತ ಗಮನ ಹರಿಸಬೇಕು. ಅಂದ್ರೆ ಜನರು ನಿಗದಿತ ಸಮಯದಲ್ಲಿ ಪಟಾಕಿ ಹೊಡೆಯುತ್ತಾರಾ, ಮಾಲಿನ್ಯ ಉಂಟುಮಾಡುವ ಪಟಾಕಿ ಯಾವ್ದು ಹೀಗೆ ಹಲವು ವಿಚಾರಗಳ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಪೊಲೀಸ್ ಇಲಾಖೆ ಈ ಮಾಹಿತಿ ಆಧಾರವಾಗಿಸಿ ಕ್ರಮ ಕೈಗೊಳ್ಳಬೇಕಿದೆ. ಆದ್ರೆ ಏನು ಕ್ರಮ ಜರುಗಿಸಬೇಕು ಅನ್ನೊ ಬಗ್ಗೆ ಇಲಾಖೆಗಳ ಸಭೆ ಇನ್ನಷ್ಟೇ ನಡೆಯಬೇಕಿದೆ.

ಇಲಾಖೆಗಳ ಈ ನಿರ್ಲಕ್ಷ್ಯದಿಂದ ಸದ್ಯ ಪಾಲಿಕೆ ಪರವಾನಿಗೆ ನೀಡಿ ಪಟಾಕಿ ಮಾರಾಟ ಮಾಡಲು ಅನುವು ಮಾಡಿಕೊಟ್ಟಿದೆ. ರಾಜಾಜಿನಗರ ರಾಮ ಮಂದಿರ ಮೈದಾನದಲ್ಲಿ ಪಟಾಕಿ ಮಾರಾಟಕ್ಕೆ ಪಾಲಿಕೆ ಪರವಾನಿಗೆ ಕೊಟ್ಟಿದೆ ಅಂತಾರೆ ವ್ಯಾಪಾರಿಗಳು.
ಹೀಗಿರುವಾಗ ಪಟಾಕಿ ಮನೆ ಮುಂದೆ ಸಿಡಿಸುವ ಬದಲು ಮೈದಾನಗಳಲ್ಲಿ ಹೊಡೆಯಿರಿ ಎಂದು ಮನವಿ ಮಾಡಲು ಸಜ್ಜಾಗಿದೆ ಜಿಲ್ಲಾಡಳಿತ. ಇನ್ನು ಇತ್ತ ಡಿಸಿಎಂ ಪರಮೇಶ್ವರ್ ಮಾತನಾಡಿ, ನಿಗದಿತ ಸಮಯದಲ್ಲಿ ದೀಪಾವಳಿ ಸರಳವಾಗಿ ಆಚರಿಸಿ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ