ಬೆಂಗಳೂರು, ನ.5- ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಿದ್ದಾಜಿದ್ದಿನ ಕಣವಾಗಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ನಾಳೆ ಫಲಿತಾಂಶ ಹೊರ ಬೀಳಲಿದೆ.
ನಾಳೆ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭಗೊಳ್ಳಲಿದ್ದು, ಮಧ್ಯಾಹ್ನದ ನಂತರ ಬಹುತೇಕ ಐದು ಕ್ಷೇತ್ರಗಳ ಸ್ಪಷ್ಟ ಚಿತ್ರಣ ಸಿಗಲಿದೆ. ಮತ ಎಣಿಕೆಗೆ ಚುನಾವಣಾ ಆಯೋಗ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಂಡಿದೆ.
ಶಿವಮೊಗ್ಗ(ಸಹ್ಯಾದ್ರಿ ಕಲಾ ಕಾಲೇಜು), ಜಮಖಂಡಿ(ಮಿನಿ ವಿಧಾನಸೌಧ), ಬಳ್ಳಾರಿ(ರಾವ್ ಬಹುದ್ದೂರು ವೈ.ಮಹಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜು), ಮಂಡ್ಯ(ಸರ್ಕಾರಿ ಕಾಲೇಉ) ಹಾಗೂ ರಾಮನಗರ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು) ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.
ಇವಿಎಂಗಳಲ್ಲಿ ಮತಗಳ ಎಣಿಕೆ ನಡೆಯುವುದರಿಂದ ರಾಮನಗರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರದ ಫಲಿತಾಂಶ 12 ಗಂಟೆಯೊಳಗೆ ಪ್ರಕಟವಾಗುವ ಸಂಭವವಿದೆ.
ಮಂಡ್ಯ, ಶಿವಮೊಗ್ಗ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶದ ಚಿತ್ರಣ ಮಧ್ಯಾಹ್ನ ನಂತರ ಸಿಗಲಿದೆ.
ಯಾರಿಗೆ ಸಿಹಿ, ಯಾರಿಗೆ ಕಹಿ:
ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಐದು ಕ್ಷೇತ್ರಗಳ ಉಪಚುನಾವಣೆ ಆಡಳಿತ ಮತ್ತು ಪ್ರತಿಪಕ್ಷಗಳ ಪಾಲಿಗೆ ನಿರ್ಣಾಯಕವಾಗಲಿದೆ.
ಒಂದು ವೇಳೆ ದೋಸ್ತಿ ಸರ್ಕಾರದ ಕೈ ಮೇಲುಗೈ ಸಾಧಿಸಿದರೆ 2019ರ ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ರಣತಂತ್ರವನ್ನು ಬದಲಾಯಿಸುವುದು ಅನಿವಾರ್ಯವಾಗುತ್ತದೆ.
ಮತದಾರ ದೋಸ್ತಿ ಸರ್ಕಾರವನ್ನು ತಿರಸ್ಕರಿಸಿ ಬಿಜೆಪಿ ಕೈ ಹಿಡಿದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸರ್ಕಾರದ ಮೇಲೆ ಪರಿಣಾಮ ಬೀರುವುದರಲ್ಲಿ ಸಂಶಯವೇ ಇಲ್ಲ. ಅಲ್ಲದೆ ಸಚಿವ ಸಂಪುಟ ವಿಸ್ತರಣೆಯಾಗದೆ ಅಸಮಾಧಾನಗೊಂಡಿರುವ ಕೆಲವು ಶಾಸಕರು ಫಲಿತಾಂಶ ಪ್ರಕಟಗೊಳ್ಳುವುದನ್ನೇ ಎದುರು ನೋಡುತ್ತಿದ್ದಾರೆ. ದೋಸ್ತಿ ಸರ್ಕಾರಕ್ಕೇನಾದರೂ ಹಿನ್ನಡೆಯಾದರೆ ಸಹಜವಾಗಿ ಭಿನ್ನಮತೀಯ ಶಾಸಕರು ಮತ್ತೆ ಸೆಡ್ಡು ಹೊಡೆಯಲು ಸಜ್ಜಾಗಿದ್ದಾರೆ.
ಇತ್ತ ಪ್ರತಿಪಕ್ಷ ಬಿಜೆಪಿ ಕೂಡ ಫಲಿತಾಂಶವನ್ನೇ ಎದುರು ನೋಡುತ್ತಿದೆ. ಶಿವಮೊಗ್ಗ ಬಳ್ಳಾರಿ ಹಾಗೂ ಜಮಖಂಡಿಯಲ್ಲಿ ಗೆದ್ದರೆ ಪುನಃ ವಿಧಾನಸೌಧದಲ್ಲಿ ಅಧಿಕಾರ ಹಿಡಿಯಲು ಆಪರೇಷನ್ ಕಮಲಕ್ಕೆ ಚಾಲನೆ ನೀಡುವ ಸಂಭವವಿದೆ. ಈಗಾಗಲೇ ಕೆಲವು ಭಿನ್ನಮತೀಯ ಶಾಸಕರನ್ನು ಸಂಪರ್ಕ ಮಾಡಿರುವ ರಾಜ್ಯ ಬಿಜೆಪಿ ನಾಯಕರು ದೋಸ್ತಿ ಸರ್ಕಾರಕ್ಕೆ ಹಿನ್ನಡೆಯಾಗಲಿ ಎಂದೇ ಎದುರು ನೋಡುತ್ತಿದ್ದಾರೆ.
ಸೋತರೆ ಕಷ್ಟ ಕಷ್ಟ:
ಈ ಉಪಸಮರದಲ್ಲಿ ಒಂದು ವೇಳೆ ಬಿಜೆಪಿ ಏನಾದರೂ ಮಖಾಡೆ ಮಲಗಿದರೆ ನಿಸ್ಸಂದೇಹವಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಉಪಾಧ್ಯಕ್ಷ ಶ್ರೀರಾಮುಲು ಸೇರಿದಂತೆ ಅನೇಕ ನಾಯಕರ ರಾಜಕೀಯ ಭವಿಷ್ಯ ಮಂಕಾಗುವ ಸಾಧ್ಯತೆ ಇದೆ. ಹೀಗಾಗಿಯೇ ಬಿಜೆಪಿ ಈ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.
ಶಿವಮೊಗ್ಗದಲ್ಲಿ ತಮ್ಮ ಪುತ್ರ ರಾಘವೇಂದ್ರನನ್ನು ಗೆಲ್ಲಿಸುವ ಹೊಣೆಗಾರಿಕೆಯನ್ನು ಯಡಿಯೂರಪ್ಪ ವಹಿಸಿಕೊಂಡಿದ್ದರೆ, ಬಳ್ಳಾರಿಯಲ್ಲಿ ಸಹೋದರಿಯನ್ನು ದಡ ಮುಟ್ಟಿಸಲು ಶ್ರೀರಾಮುಲು ಟೊಂಕ ಕಟ್ಟಿ ನಿಂತಿದ್ದಾರೆ.
ಈ ಬಾರಿ ಉಪಚುನಾವಣೆಯಲ್ಲಿ ಬಿಜೆಪಿ ಟಕ್ಕರ್ ನೀಡಲು ಕಾಂಗ್ರೆಸ್-ಜೆಡಿಎಸ್ ಎಷ್ಟೇ ವೈಮನಸ್ಸುಗಳಿದ್ದರೂ ದೋಸ್ತಿ ಮಾಡಿಕೊಂಡಿದ್ದವು. ಮಂಡ್ಯ ಮತ್ತು ರಾಮನಗರದಲ್ಲಿ ಉಭಯ ಪಕ್ಷಗಳ ಮುಖಂಡರು ಪರಸ್ಪರ ಒಬ್ಬರನ್ನೊಬ್ಬರು ಮುಖ ನೋಡದಷ್ಟು ದೂರವಾಗಿದ್ದರೂ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ಕಾರಣಕ್ಕಾಗಿಯೇ ಪರಸ್ಪರ ಕೈ ಜೋಡಿಸಿದ್ದವು. ಇದು ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಎಂಬುದು ನಾಳಿನ ಫಲಿತಾಂಶದಲ್ಲಿ ಗೊತ್ತಾಗಲಿದೆ.
ಢವ ಢವ: ನಾಳಿನ ಫಲಿತಾಂಶ ಪ್ರಕಟಣೆಗೆ ಕ್ಷಣಗಣನೆ ಆರಂಭವಾಗಿರುವಂತೆ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಆತಂಕ, ದುಗುಡ, ಢವ ಢವ ಆರಂಭವಾಗಿದೆ.
ಜಮಖಂಡಿ ಮತ್ತು ರಾಮನಗರದಲ್ಲಿ ಮಾತ್ರ ಮತದಾನದ ಪ್ರಮಾಣ ಹೆಚ್ಚಳವಾಗಿದ್ದರೆ ಉಳಿದ ಮೂರು ಲೋಕಸಭಾ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮತದಾನವಾಗಿರಲಿಲ್ಲ. ಹೀಗಾಗಿ ಮತದಾರ ಯಾರನ್ನು ಕೈ ಹಿಡಿಯಲಿದ್ದಾನೆ ಎಂಬುದು ನೀರಿನಲ್ಲಿ ಮೀನಿನ ಹೆಜ್ಜೆಯಷ್ಟೇ ನಿಗೂಢವಾಗಿದೆ . ಇನ್ನು ಫಲಿತಾಂಶ ಕುರಿತಂತೆ ಭರ್ಜರಿ ಬೆಟ್ಟಿಂಗ್ ಕೂಡ ನಡೆದಿದೆ.
ಶನಿವಾರ ನಡೆದ ಮತದಾನದಲ್ಲಿ ಶಿವಮೊಗ್ಗ ಶೇ.61.05, ಬಳ್ಳಾರಿ ಶೇ.63.85, ಮಂಡ್ಯ ಶೇ. 53.93, ರಾಮನಗರ ಶೇ.71.88 ಹಾಗೂ ಜಮಖಂಡಿಯಲ್ಲಿ ಶೇ. 77.17ರಷ್ಟು ಮತದಾನವಾಗಿತ್ತು.
ಪ್ರಮುಖ ಅಭ್ಯರ್ಥಿಗಳು:
ರಾಮನಗರ ಅನಿತಾ ಕುಮಾರಸ್ವಾಮಿ, ಮಂಡ್ಯ, ಎಲ್ ಆರ್.ಶಿವರಾಮೇಗೌಡ, ಡಾ.ಸಿದ್ದರಾಮಯ್ಯ, ಶಿವಮೊಗ್ಗದಲ್ಲಿ ರಾಘವೇಂದ್ರ, ಮಧುಬಂಗಾರಪ್ಪ, ಬಳ್ಳಾರಿಯಲ್ಲಿ ಜೆ.ಶಾಂತ, ವಿ.ಎಸ್.ಉಗ್ರಪ್ಪ , ಜಮಖಂಡಿಯಲ್ಲಿ ಸಿದ್ದು ನ್ಯಾಮೇಗೌಡ ಮತ್ತು ಶ್ರೀಕಾಂತ್ ಕುಲಕರ್ಣಿ ನಡುವೆ ಬಿರುಸಿನ ಸ್ಪರ್ಧೆ ಇದೆ.
ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಲ್.ಚಂದ್ರಶೇಖರ್ ಮೂರು ದಿನಗಳ ಹಿಂದೆಯಷ್ಟೇ ಸ್ಪರ್ಧೆಯಿಂದ ಹಿಂದೆ ಸರಿದಿರುವ ಕಾರಣ ಫಲಿತಾಂಶದ ಬಗ್ಗೆ ಯಾರಿಗೂ ಕುತೂಹಲ ಉಳಿದಿಲ್ಲ.
ಮಂಡ್ಯ ಜೆಡಿಎಸ್ನ ಭದ್ರಕೋಟೆಯಾಗಿರುವುದರಿಂದ ಬಿಜೆಪಿ ಈ ಕ್ಷೇತ್ರದ ಬಗ್ಗೆ ಯಾವುದೇ ಭರವಸೆ ಇಟ್ಟುಕೊಂಡಿಲ್ಲ. ಶಿವಮೊಗ್ಗ ಬಳ್ಳಾರಿ ಮತ್ತು ಜಮಖಂಡಿ ಕ್ಷೇತ್ರಗಳ ಫಲಿತಾಂಶಗಳ ಬಗ್ಗೆ ಎಲ್ಲರಿಗೂ ಕುತೂಹಲವಿದೆ.