ಬೆಂಗಳೂರು, ನ.4-ಸಮಾಜದಲ್ಲಿ ಜನರ ಆಲೋಚನೆ ಬದಲಾಗದೆ ವ್ಯವಸ್ಥೆ ಬದಲಾಗಲು ಸಾಧ್ಯವಿಲ್ಲ. ಸ್ತ್ರೀಯರ ಸಮಾನ ಪ್ರಾತಿನಿಧ್ಯಕ್ಕಾಗಿ ಹೋರಾಟ ಮುಂದುವರೆಯಬೇಕಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಆಯೋಜಿಸಿದ್ದ ಚುನಾವಣೆ ಒಳ-ಹೊರಗೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊಟ್ಟಮೊದಲಿಗೆ ಮತದಾನದ ಹಕ್ಕನ್ನು ಕೊಟ್ಟ ದೇಶ ಭಾರತ. ಸ್ವಾತಂತ್ರ್ಯ ಬಂದ ಕೂಡಲೇ ದೇಶದ ಜನರಿಗೆ ಮತದಾನದ ಹಕ್ಕು ನೀಡಲಾಗಿತ್ತು. ಸಾಕ್ಷರತೆ ಹೆಚ್ಚಾಗಿದ್ದು, ಮಹಿಳಾ ಜಾಗೃತಿ ಮೂಡಿದ್ದರೂ ಸಹ ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯವಿಲ್ಲ ಎಂದು ಹೇಳಿದರು.
ಸಾಮಾಜಿಕ ನ್ಯಾಯ, ಮಹಿಳಾ ಮೀಸಲಾತಿ, ಮಹಿಳಾ ಜಾಗೃತಿ, ಆಡಳಿತ ವಿಕೇಂದ್ರೀಕರಣ ಎಲ್ಲವೂ ಇದ್ದರೂ ಇಂದಿನ ದಿನಗಳಲ್ಲಿ ಮಹಿಳಾ ಪ್ರಾತಿನಿಧ್ಯ ಅಷ್ಟಕ್ಕಷ್ಟೇ ಇದೆ. ಸಂವಿಧಾನದಲ್ಲೂ ಸಮಾನತೆಯ ಪ್ರತಿಪಾದನೆಯಾಗಿದೆ. ಹಾಗಿದ್ದರೂ ಸಹ ಮಹಿಳೆಯರ ಪ್ರಗತಿಯಲ್ಲಿ ಹಿನ್ನಡೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಲಿಂಗ ಸಮಾನತೆಯೊಂದಿಗೆ ಸ್ತ್ರೀ ಸಮಾನತೆಗೂ ಹೋರಾಟ ನಡೆಯಬೇಕು. ಕುಟುಂಬದಲ್ಲೇ ಪುರುಷರನ್ನು ಹತೋಟಿಯಲ್ಲಿಟ್ಟುಕೊಳ್ಳುವ ವ್ಯವಸ್ಥೆ ಬರಬೇಕು ಎಂದರು.
ಇತ್ತೀಚಿನ ಚುನಾವಣೆಗಳಲ್ಲಿ ರಿಯಲ್ ಎಸ್ಟೇಟ್, ಜಾತಿಬಲ, ಹಣಬಲ, ತೋಳ್ಬಲಗಳ ಪ್ರಾಬಲ್ಯ ಹೆಚ್ಚಾಗುತ್ತಿದೆ. ಈ ಹಿಂದೆ ರೈತ ಮುಖಂಡರು, ಕಾರ್ಮಿಕ ಪ್ರತಿನಿಧಿಗಳು ,ಹೋರಾಟಗಾರರು, ಕನ್ನಡ ಪರ ಹೋರಾಟಗಾರರು ಸ್ಪರ್ಧಿಸಿ ಜನನಾಯಕರಾಗುತ್ತಿದ್ದರು. ಈಗ ಅಂಥವರು ಗೆದ್ದು ಬರಲು ಸಾಧ್ಯವಾಗುತ್ತಿಲ್ಲ. ವ್ಯವಸ್ಥೆ ಕೆಟ್ಟಿದೆ. ದುಡ್ಡಿಗೆ ಜಾತಿ, ಮತ ಮಾರಿದರೆ ವ್ಯವಸ್ಥೆ ಸರಿಹೋಗುವುದಿಲ್ಲ. ಇದನ್ನು ಎಲ್ಲರೂ ಅರಿಯಬೇಕು ಎಂದು ಸಲಹೆ ನೀಡಿದರು.
ಈ ಹಿಂದೆ ಜನಪ್ರತಿನಿಧಿಯಾಗಿದ್ದ ಯಶೋಧರಮ್ಮ ಅವರು ಮದ್ಯ ನಿಷೇಧ ಮಾಡದೆ ಇದ್ದಿದ್ದರಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂತಹ ಬದ್ಧತೆ ಈಗಿನವರಲ್ಲಿ ಇಲ್ಲ. ಆಗ ಅನಕ್ಷರತೆ ಹೆಚ್ಚಾಗಿತ್ತು. ಅರಿವು ಇರಲಿಲ್ಲ, ಆದರೆ ಸಂಭಾವಿತರು, ಸಜ್ಜನರು ಹೆಚ್ಚಾಗಿ ಆಯ್ಕೆಯಾಗಿ ಬರುತ್ತಿದ್ದರು ಎಂದು ಕಳವಳ ವ್ಯಕ್ತಪಡಿಸಿದರು.
ಸಮಾಜವಾದದ ಹಿನ್ನೆಲೆಯಿಂದ ಬಂದಿದ್ದ ಶಾಂತವೇರಿ ಗೋಪಾಲಗೌಡರು ಮಾತನಾಡಲು ಎದ್ದು ನಿಂತರೆ ಸರ್ಕಾರವೇ ನಡುಗುವಂತಹ ಪರಿಸ್ಥಿತಿ ಇತ್ತು. ಇಂದು ಅಂತಹ ಯಾವುದೇ ನಾಯಕರು ನಮ್ಮ ಮುಂದೆ ಇಲ್ಲ. ಜನರ ಆಲೋಚನೆಗಳಿಂದ ವ್ಯವಸ್ಥೆ ಬದಲಾವಣೆ ಸಾಧ್ಯ. 12ನೇ ಶತಮಾನದಲ್ಲೇ ವಚನಕಾರರು ಜನತಂತ್ರ ವ್ಯವಸ್ಥೆ ಚಿಂತನೆ ಕೊಟ್ಟಿದ್ದರು ಎಂದು ಸ್ಮರಿಸಿದರು.
ಇಂದು ವಿದ್ಯಾವಂತರೇ ಹೆಚ್ಚಿದ್ದರೂ ಚುನಾವಣಾ ವ್ಯವಸ್ಥೆಯಲ್ಲಿ ಜಾತೀಯತೆ ವೆÅರೆಯುತ್ತಿದೆ. ಹಣಕ್ಕಾಗಿ ಮತ ಮಾರಿಕೊಳ್ಳುವುದು ಹೆಚ್ಚಾಗಿದೆ. ಅದರಲ್ಲಿ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆಗಳಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತಿರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಸಚಿವೆ ರಾಣಿ ಸತೀಶ್ ಮಾತನಾಡಿ, ಮಕ್ಕಳನ್ನು ಸುಸಂಸ್ಕøತರನ್ನಾಗಿ ಮಾಡುವ ಮಹಿಳೆಯರು ಸಮಾಜಕ್ಕೆ ನೀಡುವ ಕೊಡುಗೆ ಅಪಾರವಾದುದು. ಅವರಿಗೆ ಸಿಕ್ಕ ಹಕ್ಕನ್ನು ದಕ್ಷತೆಯಿಂದ ನಿಭಾಯಿಸಿ ಉತ್ತಮ ಸಮಾಜ ಸೃಷ್ಟಿಗೆ ಮುನ್ನಡಿ ಇಡುತ್ತಾರೆ ಎಂದರು.
ತಮ್ಮ ಪತಿಯೇ ತಪ್ಪು ಮಾಡಿದರೂ ಅದರ ಖಂಡಿಸುವ ನೈತಿಕತೆಯನ್ನು ಬೆಳೆಸಿಕೊಳ್ಳಬೇಕು. ಭ್ರಷ್ಟರಿಗೆ ಮನೆಯಲ್ಲೇ ದಂಡನೆಯಾಗಬೇಕು. ಆಗ ಮಾತ್ರ ಭ್ರಷ್ಟತೆ ನಿರ್ಮೂಲನೆ ಸಾಧ್ಯ. ಜೊತೆಗೆ ಶೌಚಾಲಯ, ಮಂಚದಡಿ ಸಿಗುವ ಅಕ್ರಮ ಹಣ ತಪ್ಪುತ್ತದೆ ಎಂದು ಹೇಳಿದರು.
ಬಾಣಂತಿಯರು ಮತ್ತು ಮಕ್ಕಳಿಗಾಗಿ ತರುವ ಯೋಜನೆಗಳು ವಾಸ್ತವ ನೆಲೆಗಟ್ಟಿನಲ್ಲಿರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೈತ ಸಂಘದ ಮುಖಂಡರಾದ ಅನಸೂಯಮ್ಮ, ಸಾಹಿತಿ ವಿಜಯಮ್ಮ ಮತ್ತಿತರರು ಉಪಸ್ಥಿತರಿದ್ದರು.