ಉಪಚುನಾವಣಾ ಫಲಿತಾಂಶದತ್ತ ಎಲ್ಲರ ಚಿತ್ತ: ಭಾರೀ ಬೆಟ್ಟಿಂಗ್

ಬೆಂಗಳೂರು, ನ.4- ತೀವ್ರ ಕುತೂಹಲ ಕೆರಳಿಸಿದ್ದ ಉಪಚುನಾವಣಾ ಸಮರ ಮುಗಿದಿದ್ದು, ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ನ.6ರಂದು ಪ್ರಕಟವಾಗಲಿರುವ ಚುನಾವಣಾ ಫಲಿತಾಂಶದ ಮೇಲೆ ಭಾರೀ ಬೆಟ್ಟಿಂಗ್ ದಂಧೆ ನಡೆದಿದೆ.

ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಾಯಕರ ನಡುವೆ ಸೋಲು-ಗೆಲುವಿನ ಲೆಕ್ಕಾಚಾರಗಳು ಜೋರಾಗಿ ನಡೆದಿವೆ. ಚುನಾವಣೆಯಲ್ಲಿ ಗೆದ್ದರೆ, ಸೋತರೆ ಆಗುವ ಪರಿಣಾಮಗಳ ಬಗ್ಗೆ ನಾಯಕರು ಸಮಾಲೋಚನೆ ನಡೆಸುತ್ತಿದ್ದಾರೆ.
ಮೈತ್ರಿ ಸರ್ಕಾರಕ್ಕೆ ಫಲಿತಾಂಶ ವ್ಯತಿರಿಕ್ತವಾದರೆ ಮುಂದೇನು ಎಂಬ ಬಗ್ಗೆ ಮೈತ್ರಿ ಪಕ್ಷಗಳ ನಾಯಕರು ಸಮಾಲೋಚನೆಯಲ್ಲಿ ತೊಡಗಿದ್ದರೆ ಪ್ರತಿಪಕ್ಷ ಬಿಜೆಪಿಗೆ ಫಲಿತಾಂಶ ಉಲ್ಟಾ ಹೊಡೆದರೆ ಏನು ಮಾಡಬೇಕು ಎಂಬ ಚಿಂತೆಯಲ್ಲಿ ಅವರು ಚರ್ಚೆ ನಡೆಸುತ್ತಿದ್ದಾರೆ.

ಫಲಿತಾಂಶ ನಮ್ಮ ಪರವಾಗಿ ಬಂದರೆ ಸರ್ಕಾರದ ವಿರುದ್ಧ ಯಾವ ರೀತಿ ಹೋರಾಟ ಮಾಡಬೇಕು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದ್ದರೆ ಮೈತ್ರಿ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಮೈತ್ರಿ ಬಾಂಧವ್ಯವನ್ನು ಮತ್ತೆ ಹೇಗೆ ಗಟ್ಟಿಗೊಳಿಸಬೇಕು. ಮುಂಬರುವ ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಹೇಗೆ ಎದುರಿಸಬೇಕು ಎಂಬ ಬಗ್ಗೆ ಕಾಂಗ್ರೆಸ್-ಜೆಡಿಎಸ್ ಮುಖಂಡರು ಲೆಕ್ಕ ಹಾಕತೊಡಗಿದ್ದಾರೆ.

ಇತ್ತ ಪಕ್ಷದ ಕಾರ್ಯಕರ್ತರ ನಡುವೆ ಭಾರೀ ಬೆಟ್ಟಿಂಗ್ ನಡೆದಿದೆ. ಬಳ್ಳಾರಿ, ಜಮಖಂಡಿಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಬೆಟ್ಟಿಂಗ್ ದಂಧೆ ಜೋರಾಗಿದೆ. ಲಕ್ಷಾಂತರ ರೂ. ಹಣವನ್ನು ಫಲಿತಾಂಶದ ಮೇಲೆ ಜನ ಪಣಕ್ಕಿಟ್ಟಿದ್ದಾರೆ.

ಬೈಕ್, ಮೊಬೈಲ್, ಟ್ರ್ಯಾಕ್ಟರ್‍ಗಳನ್ನು ಕೂಡ ಹಲವೆಡೆ ಪಣಕ್ಕಿಟ್ಟಿರುವುದು ಕೇಳಿಬಂದಿದೆ. ಬಳ್ಳಾರಿಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಹಲವರು ಬೆಟ್ಟಿಂಗ್ ಕಟ್ಟಿದ್ದರೆ, ಕಾಂಗ್ರೆಸ್ ಮೇಲೆ ಭಾರೀ ಸಂಖ್ಯೆಯಲ್ಲಿ ಬೆಟ್ಟಿಂಗ್ ಕಟ್ಟಲಾಗಿದೆ. ಅದೇ ರೀತಿ ಜಮಖಂಡಿಯಲ್ಲೂ ಕೂಡ ಬೆಟ್ಟಿಂಗ್ ಜೋರಾಗಿದೆ. ಇನ್ನುಳಿದಂತೆ ರಾಮನಗರ, ಮಂಡ್ಯದಲ್ಲಿ ಜೆಡಿಎಸ್ ಪಕ್ಷ ಎಷ್ಟು ಪ್ರಮಾಣದಲ್ಲಿ ಗೆಲ್ಲಬಹುದು ಎಂಬ ಲೆಕ್ಕಾಚಾರದ ಮೇಲೆ ಬೆಟ್ಟಿಂಗ್ ಭರಾಟೆ ನಡೆಯುತ್ತಿದೆ.
ಈ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್‍ನ ಗೆಲುವಿನ ಹಾದಿ ಸುಲಭ ಎಂದೇ ತೀರ್ಮಾನಿಸಲಾಗಿದೆ. ಹಾಗಾಗಿ ಜೆಡಿಎಸ್ ಅಭ್ಯರ್ಥಿಗಳು ಖುಷಿಯಲ್ಲಿದ್ದಾರೆ ಹಾಗೂ ಯಾವ್ಯಾವ ಕ್ಷೇತ್ರಗಳಿಂದ ಎಷ್ಟೆಷ್ಟು ಮತ ಬಂದಿರಬಹುದು ಎಂಬ ಬಗ್ಗೆಯೂ ಗುಣಾಕಾರ-ಭಾಗಾಕಾರ ಹಾಕುವಲ್ಲಿ ತೊಡಗಿದ್ದಾರೆ.

ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಪೈಪೆÇೀಟಿ ನೀಡಿರಬಹುದು ಎಂದು ಹೇಳಲಾಗಿದೆಯಾದರೂ ಮಂಡ್ಯದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿರುವುದರಿಂದ ಗೆಲುವು ಸುಲಭಸಾಧ್ಯವಾಗಿರುವುದರಿಂದ ಅಷ್ಟಾಗಿ ಇಲ್ಲಿ ಬೆಟ್ಟಿಂಗ್ ಕಂಡುಬಂದಿಲ್ಲ.

ರಾಮನಗರದಲ್ಲಂತೂ ಬಿಜೆಪಿ ಅಭ್ಯರ್ಥಿ ಚುನಾವಣೆ ನಡೆಯುವ ಎರಡು ದಿನಗಳ ಹಿಂದೆ ಕಣದಿಂದ ನಿವೃತ್ತಿಯಾಗಿದ್ದರಿಂದ ಜೆಡಿಎಸ್ ಅಭ್ಯರ್ಥಿಯ ಗೆಲುವಿನ ಹಾದಿ ಸುಗಮವಾಗಿದ್ದು, ಇಲ್ಲಿ ಗೆಲುವಿನ ಚರ್ಚೆ ನಡೆದಿದೆಯೇ ಹೊರತು ಯಾವುದೇ ಬೆಟ್ಟಿಂಗ್ ಇಲ್ಲ. ಶಿವಮೊಗ್ಗದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು ಒಟ್ಟಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಪ್ರಚಾರ ನಡೆಸಿರುವುದರಿಂದ ಸ್ವಲ್ಪ ಪೈಪೆÇೀಟಿ ಕಂಡುಬಂದಿದೆ.

ಈ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚು ಒಲವಿರುವುದರಿಂದ ಇಲ್ಲೂ ಬೆಟ್ಟಿಂಗ್ ಇಲ್ಲ. ಇನ್ನುಳಿದಂತೆ ಜಮಖಂಡಿ ಮತ್ತು ಬಳ್ಳಾರಿಯಲ್ಲಿ ಚುನಾವಣಾ ಫಲಿತಾಂಶದ ಮೇಲೆ ಭಾರೀ ಬೆಟ್ಟಿಂಗ್ ನಡೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ