ನವದೆಹಲಿ: ಸುನಂದಾ ಪುಷ್ಕರ್ ಸಾವು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ಗೆ ನಿರ್ದಿಷ್ಟ ದಾಖಲೆಗಳನ್ನು ಹಸ್ತಾತರಿಸುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಶಶಿ ತರೂರ್ ಅವರೇ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಸಾಬೀತು ಮಾಡಲು ಪೊಲೀಸರು ಕೋರ್ಟ್ಗೆ ಇಲೆಕ್ಟ್ರಾನಿಕ್ ಪುರಾವೆಗಳನ್ನು ನೀಡಿದ್ದರು. ಇದು ಉತ್ತಮ ಸ್ಥಿತಿಯಲ್ಲ ಎಂದು ತರೂರ್ ಪರ ವಕೀಲ ವಾದಿಸಿದ್ದು, ಇದೀಗ ನಿರ್ದಿಷ್ಟ ದಾಖಲೆಗಳನ್ನು ಕಾಂಗ್ರೆಸ್ ಹಿರಿಯ ನಾಯಕನಿಗೆ ನೀಡುವಂತೆ ಆದೇಶಿಸಿದೆ.
ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ನೀಡಿದ ನಿರ್ದಿಷ್ಟ ಇಲೆಕ್ಟ್ರಾನಿಕ್ಸ್ ಪುರಾವೆಗಳು ಉತ್ತಮ ಸ್ಥಿತಿಯಲ್ಲಿ ಇಲ್ಲ ಎಂದು ಶಶಿ ತರೂರ್ ಅವರ ಹಿರಿಯ ವಕೀಲ ವಿಕಾಸ್ ಪಾಹ್ವಾ ವಾದಿಸಿದ್ದರು. ಇದನ್ನು ಆಲಿಸಿದ ಬಳಿಕ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಈ ನಿರ್ದೇಶನ ಜಾರಿಗೊಳಿಸಿದ್ದಾರೆ. ಅಲ್ಲದೇ ಇಲೆಕ್ಟ್ರಾನಿಕ್ಸ್ ದಾಖಲೆಯ ಹೊಸ ಪ್ರತಿಯನ್ನು ತರೂರ್ ಅವರಿಗೆ ಹಸ್ತಾಂತರಿಸುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾತ್ಸವ್ಗೆ ನ್ಯಾಯಾಲಯ ಸೂಚಿಸಿದೆ ಎನ್ನಲಾಗಿದೆ.
ಈ ಹಿಂದೆ ಸುನಂದಾ ಪುಷ್ಕರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಶಶಿ ತರೂರ್ಗೆ ನಿರೀಕ್ಷಣಾ ಜಾಮೀನು ಮಂಜೂರಾಗಿತ್ತು. ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ 1 ಲಕ್ಷ ರೂಪಾಯಿ ಬಾಂಡ್ ಮೇರೆಗೆ ಈ ಜಾಮೀನು ನೀಡಿತ್ತು. ಇದರೊಂದಿಗೆ ಸಾಕ್ಷಿ ನಾಶಗೊಳಿಸುವ ಪ್ರಯತ್ನ ಮಾಡಬಾರದು ಹಾಗೂ ಅನುಮತಿ ಇಲ್ಲದೆ ವಿದೇಶಕ್ಕೆ ತೆರಳದಿರುವಂತೆಯೂ ಆದೇಶಿಸಿತ್ತು.
ಏನಿದು ಕೇಸ್: 2014ರ ಜುಲೈ 17 ರಂದು ಸುನಂದಾ ಪುಷ್ಕರ್ ದೆಹಲಿಯ ಐಷಾರಾಮಿ ಹೋಟೆಲ್ವೊಂದರಲ್ಲಿ ಸಾವಿಗೀಡಾಗಿದ್ದರು. ಈ ಪ್ರಕರಣಕ್ಕೆ ಸಮಬಂಧಿಸಿದಂತೆ ಈಗಾಗಲೇ ಸಶಿ ತರೂರ್ ವಿರಿದ್ಧ ಐಪಿಸಿ ಸೆಕ್ಷನ್ 498ರ ಅಡಿಯಲ್ಲಿ ಹಾಗೂ 306 ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಅಲ್ಲದೇ ಪೊಲೀಸರು ಈಗಾಗಲೇ ಸಲ್ಲಿಸಿರುವ ಸುಮಾರು 3000 ಪುಟಗಳ ಆರೋಪ ಪಟ್ಟಿಯಲ್ಲಿ ತನ್ನ ಪತ್ನಿಗೆ ತರೂರ್ ಕಿರುಕುಳ ನೀಡುತ್ತಿದ್ದರೆಂಬ ಆರೋಪ ಮಾಡಲಾಗಿದೆ.
ಇನ್ನು ಶಶಿ ತರೂರ್ರನ್ನು ಈ ಪ್ರಕರಣದ ಏಕಮಾತ್ರ ಆರೋಪಿ ಎಂದು ತಿಳಿಸಲಾಗಿದೆ. ಪ್ರಕರಣದಲ್ಲಿ ಈ ದಂಪತಿಯ ಮನೆಯಲ್ಲಿದ್ದ ಸಹಾಯಕ ನಾರಾಯಣ ಸಿಂಹ ಪ್ರಮುಖ ಸಾಕ್ಷಿಯಾಗಿದ್ದಾರೆ. ತರೂರ್ ವಿರುದ್ಧ ಸೆಕ್ಷನ್ 498 ಎ ಹಾಗೂ 306ರ ಅಡಿಯಲ್ಲಿ ಆರೋಪ ದಾಖಲಿಸಲಾಗಿದೆ. ಜೊತೆಗೆ 498 ಎ ಅಡಿಯಲ್ಲಿ ಗರಿಷ್ಟ ಮೂರು ವರ್ಷ ಹಾಗೂ ಸೆಕ್ಷನ್ 306ರ ಅಡಿಯಲ್ಲಿ ಗರಿಷ್ಟ 10 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಗಳಿವೆ ಎನ್ನುತ್ತಿವೆ ಮೂಲಗಳು.