ಬೆಂಗಳೂರು, ನ.4-ರಾಮನಗರದ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಅವರ ನಾಮಪತ್ರ ಹಿಂಪಡೆಯಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಣದ ಆಮಿಷವೊಡ್ಡಿಲ್ಲ ಎನ್ನುವುದಾರೆ ಚಾಮುಂಡೇಶ್ವರಿಗೆ ಬಂದು ಪ್ರಮಾಣ ಮಾಡಲಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರುದ್ರೇಶ್ ಸವಾಲು ಹಾಕಿದ್ದಾರೆ.
ಎಲ್.ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು ದೈವ ಇಚ್ಛೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ನೀವು ಅವರಿಗೆ ಯಾವುದೇ ರೀತಿಯ ಆಸೆ, ಅಧಿಕಾರದ ಆಮಿಷ , ಹಣ ನೀಡಿಲ್ಲ ಎಂದು ರಾಮನಗರದ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ ಎಂದು ಬಹಿರಂಗ ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಂದ್ರಶೇಖರ್ಗೆ ಚುನಾವಣಾ ಕಣದಿಂದ ಹಿಂದೆ ಸರಿಯಲು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇವರಿಗೆ ಎಷ್ಟು ಹಣದ ಆಮಿಷವೊಡ್ಡಿದ್ದಾರೆ ಎಂಬುದಕ್ಕೆ ನನ್ನ ಬಳಿ ದಾಖಲೆಗಳಿವೆ.
ಯಾವ ಸಂದರ್ಭದಲ್ಲಿ ದೂರವಾಣಿ ಕರೆ ಮಾಡಿದ್ದಾರೆ. ಬಳ್ಳಾರಿಯಲ್ಲಿದ್ದ ಡಿ.ಕೆ.ಶಿವಕುಮಾರ್ ಮಧ್ಯರಾತ್ರಿ ಬೆಂಗಳೂರಿಗೆ ಏಕೆ ಬಂದರು? ಎಲ್ಲಿ ಹಣ ನೀಡಿದ್ದಾರೆ ಎಂಬುದು ನಮಗೂ ಗೊತ್ತು. ಯಡಿಯೂರಪ್ಪನವರ ಮಕ್ಕಳು ಹಣದ ಚೀಲವನ್ನಿಟ್ಟುಕೊಂಡು ನಮ್ಮ ಪಕ್ಷದ ಶಾಸಕರನ್ನು ಖರೀದಿ ಮಾಡಲು ಹೊರಟ್ಟಿದ್ದಾರೆಂದು ಆರೋಪಿಸುತ್ತಿದ್ದಾರೆ. ರಾಮನಗರದಲ್ಲಿ ಇವರು ಮಾಡಿದ್ದು ಆದರ್ಶ ರಾಜಕಾರಣವೇ ಎಂದು ಪ್ರಶ್ನಿಸಿದರು.
ಚಂದ್ರಶೇಖರ್ ಬೆನ್ನಿಗೆ ಚೂರಿ ಹಾಕುತ್ತಾರೆಂದು ನಂಬಿರಲಿಲ್ಲ. ಪಕ್ಷ ಅವರಿಗೆ ಎಲ್ಲ ರೀತಿಯ ಸಹಾಯ ನೀಡಿತ್ತು. ಕೇಂದ್ರ ಸಚಿವರಾದ ಅನಂತಕುಮಾರ್ ಸೇರಿದಂತೆ ಅನೇಕರು ಸಹಾಯ ಮಾಡಿದ್ದರು. ಹಣದ ಆಸೆಗಾಗಿ ತಮ್ಮನ್ನೇ ತಾವು ಮಾರಿಕೊಂಡ ಚಂದ್ರಶೇಖರ್ ಪಕ್ಷದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ನಲ್ಲಿ ನನಗೆ ಉಸಿರುಗಟ್ಟುವ ವಾತಾವರಣವಿದೆ ಎಂದು ಹೇಳಿದ್ದ ಚಂದ್ರಶೇಖರ್ ಕೊನೆಗೆ ಯಾರದೋ ಮಾತು ಕಟ್ಟಿಕೊಂಡು ಚುನಾವಣಾ ಕಣದಿಂದ ನಿವೃತ್ತಿಯಾಗಿದ್ದಾರೆ. ನಮಗೆ ರಾಮನಗರದಲ್ಲಿ ಹಿನ್ನಡೆಯಾಗಿರಬಹುದು. ಆದರೆ ಇದರಿಂದ ಪಕ್ಷಕ್ಕೆ ಯಾವುದೇ ತೊಂದರೆಯಿಲ್ಲ ಎಂದರು.
ಬೇರೆಯವರು ಮಾಡಿದರೆ ಆಪರೇಷನ್ ಕಮಲ ಎಂದು ಹೇಳುವ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಯಾವ ನೈತಿಕತೆ ಇಟ್ಟುಕೊಂಡು ಬೇರೆ ಪಕ್ಷಗಳ ಬಗ್ಗೆ ಮಾತನಾಡುತ್ತಾರೆ. ನೀವು ರಾಮನಗರದಲ್ಲಿ ಒಬ್ಬ ಅಭ್ಯರ್ಥಿಯನ್ನು ಕಣದಿಂದ ಹಿಂದಕ್ಕೆ ಸರಿಸಿರಬಹುದು. ಮುಂದೆ ನಿಮಗೂ ಇದೇ ಗತಿ ಬರುತ್ತದೆ ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಸಿದರು.
ರಾಜ್ಯ ನಾಯಕರ ಹೊಂದಾಣಿಕೆ ಕೊರತೆಯಿಂದಾಗಿ ಸ್ವಲ್ಪ ವ್ಯತ್ಯಾಸಗಳಾಗಿವೆ. ಇಲ್ಲಿ ನಡೆದಿರುವ ಬೆಳವಣಿಗೆಯನ್ನು ರಾಜ್ಯಾಧ್ಯಕ್ಷರಾದ ಯಡಿಯೂರಪ್ಪನವರ ಗಮನಕ್ಕೆ ತರುತ್ತೇವೆ. ನಾನು ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಬಲವಾಗಿ ಪಕ್ಷ ಸಂಘಟನೆ ನಡೆಸಲಿದ್ದೇನೆ ಎಂದು ರುದ್ರೇಶ್ ಹೇಳಿದರು.