ಬೆಂಗಳೂರು, ನ.4-ಉಪಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನ.8 ರಂದು ನಡೆಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಸಿದ್ಧಗೊಂಡಿದ್ದು, 63ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ 63 ಸಾಧಕರನ್ನು ಗೌರವಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯು ಈಗಾಗಲೇ ಸರ್ಕಾರಕ್ಕೆ ಸಾಧಕರ ಪಟ್ಟಿಯನ್ನು ಶಿಫಾರಸು ಮಾಡಿದೆ.
ಪ್ರಶಸ್ತಿ ಆಯ್ಕೆ ಸಂಬಂಧ 500ಕ್ಕೂ ಹೆಚ್ಚಿನ ಅರ್ಜಿಗಳು ಬಂದಿದ್ದು, ಆಯ್ಕೆ ಸಮಿತಿ ಪರಾಮರ್ಶೆ ನಡೆಸಿ 126 ಅರ್ಜಿಗಳನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ನೀಡಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಜಯಮಾಲಾ ನೇತೃತ್ವದ ಸಮಿತಿ ಇದರಲ್ಲಿ 63 ಸಾಧಕರನ್ನು ಗುರುತಿಸಿ ಅಂತಿಮ ಪಟ್ಟಿಯನ್ನು ನ.7 ರಂದು ಪ್ರಕಟಿಸಲಿದ್ದು, ನ.8 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲು ಉದ್ದೇಶಿಸಲಾಗಿದೆ.
ಸಾಮಾಜಿಕಸೇವೆ, ಆರೋಗ್ಯ ಸೇವೆ, ಮಾಧ್ಯಮ, ಕಲೆ, ಸಾಹಿತ್ಯ, ಸಂಸ್ಕøತಿ, ಶಿಕ್ಷಣ, ಹೊರನಾಡ ಕನ್ನಡಿಗರು, ಸಂಘ ಸಂಸ್ಥೆಗಳು, ವಿಶಿಷ್ಟ ಸಾಧನೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಪ್ರಶಸ್ತಿಗೆ ಗುರುತಿಸಲಾಗಿದೆಯಲ್ಲದೆ, ಅರ್ಜಿ ಸಲ್ಲಿಸದ ಅರ್ಹರನ್ನೂ ಕೂಡ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದ ಹಲವು ಜನರು ಈ ಬಾರಿ ಪ್ರಶಸ್ತಿ ಪಡೆಯುವ ಸಾಧ್ಯತೆ ಇದೆ. ಪ್ರಾದೇಶಿಕ ಹಿನ್ನೆಲೆ, ಜಿಲ್ಲೆ, ವರ್ಗಗಳನ್ನು ಪರಿಗಣಿಸಿ, ಕಲೆಯ ಪ್ರಾಕಾರಗಳನ್ನು ಗುರುತಿಸಿ ಸಾಹಿತ್ಯ ರಚನೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವವರನ್ನು ಗಮನಿಸಿ ಯಾವುದೇ ಒತ್ತಡಗಳಿಗೆ ಮಣಿಯದೆ, ಯಾವುದೇ ಲಾಬಿಗೆ ಅವಕಾಶ ನೀಡದಂತೆ ಆಯ್ಕೆ ಸಮಿತಿ ಕಾರ್ಯನಿರ್ವಹಿಸಿದೆ.
ರಾಜ್ಯೋತ್ಸವ ಪ್ರಶಸ್ತಿಗೆ ಹೈಕೋರ್ಟ್ ಮಾರ್ಗಸೂಚಿ ನಿಗದಿಪಡಿಸಿದ ಹಿನ್ನೆಲೆಯಲ್ಲಿ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವವರು, ಒತ್ತಡ ಹೇರುವವರ ಸಂಖ್ಯೆ ಬಹುತೇಕ ಕಡಿಮೆಯಾಗಿದೆ. ಎಷ್ಟೇ ಅರ್ಜಿಗಳು ಬಂದರೂ ಹೈಕೋರ್ಟ್ ಸೂಚಿಸಿರುವ ಮಾರ್ಗಸೂಚಿಯಡಿಯಲ್ಲಿಯೇ ಪ್ರಶಸ್ತಿಗೆ ಆಯ್ಕೆ ನಡೆಯಲಿದೆ.