ನವೆಂಬರ್ 6 ರಂದು ಉಪಚುನಾವಣೆ ಫಲಿತಾಂಶ

ಬೆಂಗಳೂರು, ನ.4-ರಾಜ್ಯದ ಎರಡು ವಿಧಾನಸಭೆ, ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ನವೆಂಬರ್ 6 ರಂದು ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.
ಭಾರತದ ಚುನಾವಣಾ ಆಯೋಗ ಉಪಚುನಾವಣೆಯ ಮತ ಎಣಿಕೆ ಮಾಡಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಮತದಾನ ಕೇಂದ್ರಗಳ ಸ್ಟ್ರಾಂಗ್ ರೂಮ್‍ನಲ್ಲಿ ಮತ ಯಂತ್ರಗಳನ್ನು ಸುರಕ್ಷಿತವಾಗಿ ಹಾಗೂ ಬಿಗಿ ಭದ್ರತೆಯೊಂದಿಗೆ ಇಡಲಾಗಿದೆ. ಮತ ಯಂತ್ರ ಕೇಂದ್ರಗಳಿಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಬಿಗಿ ಭದ್ರತೆ ಒದಗಿಸಲಾಗಿದೆ.

ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ, ಬಿಜೆಪಿ ಅಭ್ಯರ್ಥಿ ಶಾಂತಾ ಸೇರಿದಂತೆ ನಾಲ್ವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮಧುಬಂಗಾರಪ್ಪ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸೇರಿದಂತೆ ನಾಲ್ಕು ಮಂದಿ ಸ್ಪರ್ಧಿಸಿದ್ದರು.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ, ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಸೇರಿದಂತೆ 9 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮೇಗೌಡ, ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಸೇರಿದಂತೆ 7 ಮಂದಿ ಅಭ್ಯರ್ಥಿಗಳು ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕಿ ಅನಿತಾಕುಮಾರಸ್ವಾಮಿ ಸೇರಿದಂತೆ 7 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು.

ರಾಮನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಕೊನೆ ಗಳಿಗೆಯಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. ಉಪಚುನಾವಣೆಯ ಐದು ಕ್ಷೇತ್ರಗಳಲ್ಲಿ ಒಟ್ಟು 31 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಕ್ಷೇತ್ರಗಳನ್ನೂ ಹಂಚಿಕೆ ಮಾಡಿಕೊಂಡು ರಾಮನಗರ, ಮಂಡ್ಯ, ಶಿವಮೊಗ್ಗದಲ್ಲಿ ಜೆಡಿಎಸ್ ಸ್ಪರ್ಧೆಗಿಳಿದಿದ್ದರೆ, ಜಮಖಂಡಿ, ಬಳ್ಳಾರಿಯಲ್ಲಿ ಕಾಂಗ್ರೆಸ್ ಸ್ಪರ್ಧಿಸಿತ್ತು.ಆದರೆ ಬಿಜೆಪಿ ಏಕಾಂಗಿಯಾಗಿ ಎಲ್ಲ ಕ್ಷೇತ್ರಗಳಲ್ಲಿ ಸ್ಪಧೆರ್É ಮಾಡಿತ್ತು. ಎಲ್ಲಾ ಅಭ್ಯರ್ಥಿಗಳ ಹಣೆ ಬರಹವನ್ನು ನಿನ್ನೆ ಮತದಾರರು ನಿರ್ಧಾರ ಮಾಡಿದ್ದಾರೆ. ಅಭ್ಯರ್ಥಿಗಳ ಹಣೆ ಬರಹ ಮತ ಯಂತ್ರದಲ್ಲಿದ್ದು, ನವೆಂಬರ್ 6 ರಂದು ಫಲಿತಾಂಶ ಹೊರಬೀಳಲಿದೆ.

ಅಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಮತ ಎಣಿಕೆಗೆ ಒಟ್ಟು 416 ಸಿಬ್ಬಂದಿ, ಮತ ಎಣಿಕೆ ಮೇಲ್ವಿಚಾರಣೆಗೆ 416 ಹಾಗೂ ಸೂಕ್ಷ್ಮ ವೀಕ್ಷಕರಾಗಿ 416 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ 128 ಸಿಬ್ಬಂದಿ ಮತ ಎಣಿಕೆ ಕಾರ್ಯನಿರ್ವಹಿಸಲಿದ್ದಾರೆ.
ಮಂಡ್ಯ, ಶಿವಮೊಗ್ಗ ಕ್ಷೇತ್ರಗಳಲ್ಲಿ ತಲಾ 128 ಹಾಗೂ ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 16 ಸಿಬ್ಬಂದಿ ಮತ ಎಣಿಕೆ ಕಾರ್ಯದಲ್ಲಿ ತೊಡಗಲಿದ್ದಾರೆ. ಆಯಾ ಕ್ಷೇತ್ರದಲ್ಲಿ ಅಷ್ಟೇ ಪ್ರಮಾಣದ ಮತ ಎಣಿಕೆ ಮೇಲ್ವಿಚಾರಕರು ಹಾಗೂ ಸೂಕ್ಷ್ಮ ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ನವೆಂಬರ್ 6 ರಂದು ಮಧ್ಯಾಹ್ನದ ವೇಳೆಗೆ ಚುನಾವಣಾ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ. ಬಳ್ಳಾರಿ ಕ್ಷೇತ್ರದ ಮತ ಎಣಿಕೆ ಬಳ್ಳಾರಿಯ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರವನ್ನು ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಸ್ಥಾಪಿಸಲಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರವನ್ನು ಮಂಡ್ಯ ಸರ್ಕಾರಿ (ಸ್ವಾಯತ್ತ) ಕಾಲೇಜಿನಲ್ಲಿ ಸ್ಥಾಪಿಸಲಾಗಿದೆ.

ಜಮಖಂಡಿ ಕ್ಷೇತ್ರದ ಮತ ಎಣಿಕೆಯು ಜಮಖಂಡಿ ಮಿನಿ ವಿಧಾನಸೌಧದಲ್ಲಿ ನಡೆದರೆ, ರಾಮನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವು ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ ಎಂದು ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ನಿನ್ನೆ ಐದು ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಜಮಖಂಡಿಯಲ್ಲಿ ಶೇ.77.17ರಷ್ಟು ಹೆಚ್ಚಿನ ಮತದಾನವಾಗಿದ್ದರೆ, ಮಂಡ್ಯದಲ್ಲಿ ಶೇ.53.93ರಷ್ಟು ಕಡಿಮೆ ಮತದಾನವಾಗಿದೆ. ಶಿವಮೊಗ್ಗದಲ್ಲಿ ಶೇ.61.05ರಷ್ಟು, ಬಳ್ಳಾರಿಯಲ್ಲಿ ಶೇ.63.85 ರಷ್ಟು ಹಾಗೂ ರಾಮನಗರದಲ್ಲಿ ಶೇ.71.88ರಷ್ಟು ಮತದಾನವಾಗಿದೆ.
ಮತ ಯಂತ್ರಗಳನ್ನು ಈಗಾಗಲೇ ಮತ ಎಣಿಕೆ ಕೇಂದ್ರಗಳಲ್ಲಿ ಸುರಕ್ಷಿತವಾಗಿ ಪೆÇಲೀಸ್ ಬಿಗಿ ಭದ್ರತೆಯೊಂದಿಗೆ ಇಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ