ಬೆಂಗಳೂರು, ನ.3- ರಾಜ್ಯದ ಗ್ರಾಮೀಣ ಬ್ಯಾಂಕ್ಗಳಲ್ಲಿ ಉತ್ತರ ಭಾರತದ ಅಧಿಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸ್ಥಳೀಯರಿಗೆ ಬ್ಯಾಂಕ್ ವ್ಯವಹಾರ ನಡೆಸಲು ತೀವ್ರ ತೊಂದರೆಯಾಗುತ್ತಿದ್ದು, ಕನ್ನಡ ಗೊತ್ತಿರುವವರನ್ನು ನೇಮಿಸಬೇಕೆಂದು ಕವಿ ಡಾ.ಸಿದ್ದಲಿಂಗಯ್ಯ ಆಗ್ರಹಿಸಿದ್ದಾರೆ.
ನಯನ ಸಭಾಂಗಣದಲ್ಲಿ ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಆರ್ಸಿಐ) ಸಂಘಟನೆ ಹಮ್ಮಿಕೊಂಡಿದ್ದ ವಿಶ್ವ ಸಂವಹನಕಾರರ ದಿನಾಚರಣೆ ಹಾಗೂ ಖಾದ್ರಿ ಅಚ್ಯುತನ್ ಸ್ಮಾರಕ ಸಂವರನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ರೈತರಿಗೆ ಕನ್ನಡ ಭಾಷೆ ಬಿಟ್ಟು ಬೇರೆ ಯಾವುದೇ ಭಾಷೆ ಗೊತ್ತಿರದ ಕಾರಣ ಬ್ಯಾಂಕ್ಗಳಲ್ಲಿ ವ್ಯವಹಾರ ನಡೆಸಲು ಕಷ್ಟವಾಗುತ್ತಿದೆ. ಹಾಗಾಗಿ ಕನ್ನಡ ಬಲ್ಲ ಅಧಿಕಾರಿಗಳನ್ನು ಗ್ರಾಮೀಣ ಬ್ಯಾಂಕ್ಗಳಿಗೆ ನೇಮಿಸಬೇಕೆಂದು ಮನವಿ ಮಾಡಿದರು.
ಸಾಹಿತಿ ಗೊ.ರು.ಚನ್ನಬಸಪ್ಪ ಮಾತನಾಡಿ, ಸಂವಹನಕಾರರ ಕೆಲಸ ಸುದ್ದಿಯನ್ನು ಒಬ್ಬರಿಂದ ಒಬ್ಬರಿಗೆ ಮುಟ್ಟಿಸುವುದಿಲ್ಲ. ಒಳ್ಳೆಯ ವಿಚಾರಗಳನ್ನು ಜನರಿಗೆ ತಲುಪಿಸುವಂತಹ ಮನೋಭಾವನೆ ಬೆಳೆಯಬೇಕು. ಸಮಾಜ ತಿದ್ದುವಂತಹ ಕಾರ್ಯ ನಿರ್ವಹಿಸುವ ಕಲೆಯನ್ನು ಕರಗತ ಮಾಡಿಕೊಂಡಲ್ಲಿ ಉತ್ತಮ ಸಂವಹನಕಾರರಾಗಬಹುದು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ನಿವೃತ್ತ ನ್ಯಾ.ಡಿ.ವಿ.ಶೈಲೇಂದ್ರಕುಮಾರ್, ಬೆಂಗಳೂರು ವಿವಿ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್, ಪಿಆರ್ಸಿಐ ಮುಖ್ಯಸ್ಥ ಎಂ.ವಿ.ವಿಜಯ್ಕುಮಾರ್, ಬೆಂಗಳೂರು ವಲಯ ಮುಖ್ಯಸ್ಥೆ ಟಿ.ಎಸ್.ಲತಾ ಮತ್ತಿತರರಿದ್ದರು.
ಇದೇ ವೇಳೆ ಐಐಎಸ್ಸಿ ವಿಜ್ಞಾನಿ, ಟಿ.ವಿ.ರಾಮಚಂದ್ರ, ಸಂಗೀತ ಕಲಾವಿದ ಎಂ.ಕೆ.ಗೋಪಿನಾಥ್, ಆರ್ಜೆ ಕಲಾವಿದ ಸಂದೀಪ್ರಾಜ್, ಪತ್ರಕರ್ತ ರಾಜೇಶ್ ರೈ ಚಟ್ಲ, ಕಲಾವಿದೆ ವಿದ್ಯಾ ಹೆಗಡೆ, ಶಿಕ್ಷಣ ತಜ್ಞ ಕೆ.ಬಿ.ರಾವ್, ಅನಿತಾ ಮೇರಿ, ಯಶಸ್ ನಾಚಪ್ಪ, ವರ್ಷಿತಾ ಎಸ್.ಎನ್. ಇವರಿಗೆ ಖಾದ್ರಿ ಅಚ್ಯುತನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.