ರವೀಂದ್ರ ಅವರ ನಿಧನ ನೋವು ತಂದಿದೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನ.3-ಹರಪನಹಳ್ಳಿಯಲ್ಲಿ ಸೋತಿದ್ದು ಆಶ್ಚರ್ಯ. ಅವರ ಸಾವು ಆಶ್ಚರ್ಯ. ಚಿಕ್ಕ ವಯಸ್ಸಿನವರಾಗಿ ರವೀಂದ್ರ ಅವರ ಸಾವು ತುಂಬಾ ನೋವು ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದರು.
ಎಂ.ಪಿ.ರವೀಂದ್ರ ಅವರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸಪೇಟೆಯಲ್ಲಿ ಅ.29ರಂದು ರವೀಂದ್ರ ಅವರು ಭೇಟಿಯಾದಾಗ ಅವರ ಆರೋಗ್ಯ ವಿಚಾರಿಸಿದ್ದೆ. ಸಮಸ್ಯೆ ಇಲ್ಲ, ಚೆನ್ನಾಗಿದ್ದೇನೆ ಎಂದು ಹೇಳಿದ್ದರು.
ಆದರೆ ಮಾರನೆ ದಿನ ಆಸ್ಪತ್ರೆಗೆ ದಾಖಲಾಗಿದ್ದರು. ಇಷ್ಟು ಬೇಗ ಸಾಯುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಸಾಯುವಂತಹ ವಯಸ್ಸೂ ಅವರದಲ್ಲ ಎಂದು ನುಡಿದರು.

ಹರಪನಹಳ್ಳಿಯನ್ನು ದಾವಣಗೆರೆಯಿಂದ ಬಳ್ಳಾರಿಗೆ ಸೇರಿಸಬೇಕೆಂದು ಗಲಾಟೆ ಮಾಡಿದ್ದರು. ಅದರಲ್ಲಿ ಯಶಸ್ವಿಯೂ ಆದರು. 371(ಜೆ) ಸೌಲಭ್ಯಕ್ಕಾಗಿ ಹರಪನಹಳ್ಳಿಯನ್ನು ದಾವಣಗೆರೆಯಿಂದ ಬಳ್ಳಾರಿಗೆ ಸೇರಿಸಲು ಅವರು ಮಾಡಿದ ಪ್ರಯತ್ನದಿಂದ ಅಲ್ಲಿನ ಜನರಿಗೆ ಸೌಲಭ್ಯ ದೊರೆಯುವಂತಾಗಿದೆ. ಆದರೆ ಆ ಕ್ಷೇತ್ರದಲ್ಲಿ ಅವರು ಸೋತಿದ್ದು, ಆಶ್ಚರ್ಯ ತಂದಿತ್ತು. ಇದೀಗ ಅವರ ಸಾವು ಅದೇ ರೀತಿಯಾಗಿದೆ ಎಂದು ನೊಂದು ನುಡಿದರು.

ಹುಟ್ಟು-ಸಾವು ಸಾಮಾನ್ಯ. ಚಿಕ್ಕವರು ಸಾಯಬಾರದು. ಪ್ರಗತಿಪರ ರಾಜಕಾರಣಿಯ ಮಗನಾಗಿದ್ದ ಅವರು ಸಹಕಾರ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದರು. ಚಿಕ್ಕ ಹುಡುಗನಿಂದಲೂ ಅವರನ್ನು ನೋಡಿದ್ದೆ. ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಸಂತಾಪ ಸೂಚಿಸಿದರು.
ತಂದೆ-ತಾಯಿ ಮುಂದೆ ಮಕ್ಕಳು ಸಾಯಬಾರದು. ಆ ನೋವು ಸಹಿಸಲು ಅಸಾಧ್ಯವಾದುದು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಂಬನಿ ಮಿಡಿದರು.

ಆರೋಗ್ಯದ ಬಗ್ಗೆ ಅವರು ಕಾಳಜಿ ವಹಿಸಲಿಲ್ಲ. ಆಸ್ಪತ್ರೆಗೆ ಅ.30 ರಂದು ನಡೆದುಕೊಂಡೇ ಹೋಗಿ ದಾಖಲಾಗಿದ್ದರು. ಎಚ್ಚರ ವಹಿಸಿದ್ದರೆ ಇಂತಹ ಸಂದರ್ಭ ಬರುತ್ತಿರಲಿಲ್ಲ ಎಂದು ಹೇಳಿದರು.
ನಾನು ಎಂ.ಪಿ.ಪ್ರಕಾಶ್ ಅವರು ಎದುರುಬದುರು ಮನೆಯಲ್ಲೇ ವಾಸವಿದ್ದೆವು. ಅಂದಿನಿಂದ ರವೀಂದ್ರ ಅವರನ್ನು ನೋಡಿದ್ದೇನೆ. ಸಾಯುವ ವಯಸ್ಸು ಅವರದಲ್ಲ ಎಂದು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ