ಕ್ರಷರ್ ಲೈಸನ್ಸ್ ನವೀಕರಣ ಹಾಗೂ ಆನ್‍ಲೈನ್ ಪರ್ಮಿಟ್ ಪದ್ಧತಿ ಸರಳೀಕರಣಕ್ಕೆ ಒತ್ತಾಯ

ಬೆಂಗಳೂರು, ನ.3-ಕ್ರಷರ್ ಲೈಸನ್ಸ್ ನವೀಕರಣ ಹಾಗೂ ಆನ್‍ಲೈನ್ ಪರ್ಮಿಟ್ ಪದ್ಧತಿಯನ್ನು ಸರಳೀಕರಣ ಗೊಳಿಸಬೇಕು ಎಂದು ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ಸಂಜೀವ ಅಡ್ಡಿ ಹೊಳೆ ಮಾತನಾಡಿ, ಈ ಹಿಂದೆ ಕ್ರಷರ್ ಮಾಲೀಕರು ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ರಾಜ್ಯ ಸರ್ಕಾರ 10 ವರ್ಷಗಳಿಗೊಮ್ಮೆ ಕ್ರಷರ್ ಲೈಸನ್ಸ್ ನವೀಕರಣ ಮಾಡಿ ಕೊಡಲಾಗುವುದು. ಆನ್‍ಲೈನ್ ಪರ್ಮಿಟ್ ಪದ್ಧತಿಯನ್ನು ಸರಳೀಕರಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿತ್ತು. ಆದರೆ ಇದುವರೆಗೂ ಇದು ಈಡೇರಿಲ್ಲ. ಲೈಸನ್ಸ್ ನವೀಕರಣ ಮಾಡಿಕೊಡದೆ ಇರುವುದರಿಂದ ನಮಗೆ ಹಲವಾರು ರೀತಿಯ ತೊಂದರೆಗಳಾಗುತ್ತಿವೆ ಎಂದು ಹೇಳಿದರು.

ಸರ್ಕಾರ ಸುರಕ್ಷಿತ ವಲಯದ ಪಕ್ಕದಲ್ಲಿನ ರಸ್ತೆಗಳನ್ನು ಸುರಕ್ಷತೆ ಮಾಡಿಕೊಟ್ಟಿಲ್ಲ. ಇದರಿಂದ ಸುರಕ್ಷಿತ ವಲಯದ ಸಮೀಪದ ರೈತರಿಂದ ನಮ್ಮ ಕ್ರಷರ್ ಮಾಲೀಕರಿಗೆ ತೊಂದರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಲೈಸನ್ಸ್ ಇದ್ದರೂ ಕೂಡ ಅಧಿಕಾರಿಗಳು ಗಣಿಗಾರಿಕೆ ಮಾಡಲು ಬಿಡುತ್ತಿಲ್ಲ. ಇದರಿಂದ ಬದುಕಲು ತೊಂದರೆಯಾಗುತ್ತಿದೆ. 2011ರಲ್ಲಿ ಸುಪ್ರೀಂಕೋಟ್ ಆದೇಶದ ಮೇರೆಗೆ ರಾಜ್ಯ ಸರ್ಕಾರ ಕ್ರಷರ್ ಮತ್ತು ಗಣಿಗಾರಿಕೆ ಸುರಕ್ಷಿತ ವಲಯ ಮಾಡುವುದಾಗಿ ಘೋಷಣೆ ಮಾಡಿತ್ತು. ಆದರೆ ಇಲ್ಲಿವರೆಗೆ ನಮ್ಮ ರಾಜ್ಯದ ಕ್ರಷರ್ ಮಾಲೀಕರಿಗೆ ಯಾವುದೇ ಸುರಕ್ಷತೆಯನ್ನು ಮಾಡಿಕೊಟ್ಟಿಲ್ಲ ಎಂದು ಆರೋಪಿಸಿದರು.

ನಮ್ಮ ರಾಜ್ಯದ ಕ್ರಷರ್ ಮಾಲೀಕರಿಗೆ ಸುರಕ್ಷತೆ ಒದಗಿಸಬೇಕೆಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್, ಕಾರ್ಯದರ್ಶಿ ಭಾಸ್ಕರ್, ಸಂಘಟನಾ ಕಾರ್ಯದರ್ಶಿ ಕೆ.ವಿ.ಚೌಧರಿ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ