ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 4,532 ಕೋಟಿ ರೂ. ನಷ್ಟ

ಹೊಸದಿಲ್ಲಿ: ನೀರವ್‌ ಮೋದಿಮತ್ತಿತರರ ವಂಚನೆ ಹಗರಣದಿಂದ ತತ್ತರಿಸಿದ್ದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌(ಪಿಎನ್‌ಬಿ), ಸೆಪ್ಟೆಂಬರ್‌ಗೆ ಅಂತ್ಯವಾದ ಎರಡನೇ ತ್ರೈಮಾಸಿಕದಲ್ಲಿ 4,532 ಕೋಟಿ ರೂ. ನಷ್ಟ ಅನುಭವಿಸಿದೆ. ವಸೂಲಾಗದ ಸಾಲಗಳ(ಎನ್‌ಪಿಎ) ಏರಿಕೆಯಿಂದಾಗಿ ಹೆಚ್ಚಿನ ನಷ್ಟ ದಾಖಲಾಗಿದೆ.

ಕಳೆದ 2016-17ರ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಸರಕಾರಿ ಸ್ವಾಮ್ಯದ ಈ ಬ್ಯಾಂಕ್‌, 561 ಕೋಟಿ ರೂ. ನಿವ್ವಳ ಲಾಭ ದಾಖಲಿಸಿತ್ತು. ಆದರೆ, ಈಗ ನಷ್ಟದಲ್ಲಿ ವಹಿವಾಟು ಮುಂದುವರೆಸಿದೆ. ಈ ಎರಡನೇ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಆದಾಯವು 14,035 ಕೋಟಿ ರೂ.ಗೆ ಇಳಿದಿದೆ. ವರ್ಷದ ಹಿಂದೇ ಇದೇ ಅವಧಿಯಲ್ಲಿ ಆದಾಯ 14,205 ಕೋಟಿ ರೂ. ಇತ್ತು. ಬಿಎಸ್‌ಇ ಫೈಲಿಂಗ್‌ನಲ್ಲಿ ಈ ಅಂಶ ಸ್ಪಷ್ಟವಾಗಿದೆ.

ಬ್ಯಾಂಕ್‌ನ ಎನ್‌ಪಿಎ ಶೇ.17.16ರಷ್ಟು ಏರಿಕೆಯಾಗಿದ್ದು 81,250 ಕೋಟಿ ರೂ. ಮುಟ್ಟಿದೆ. ವರ್ಷದ ಹಿಂದೆ 57,630 ಕೋಟಿ ರೂ. ಇತ್ತು. ಈ ಪರಿಣಾಮ ಎನ್‌ಪಿಎ ನಿಭಾಯಿಸಲು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ 7,733 ಕೋಟಿ ರೂ. ತೆಗೆದಿಡಲಾಗಿದೆ. ಕಳೆದ ತ್ರೈಮಾಸಿಕದಲ್ಲಿ 2,693 ಕೋಟಿ ರೂ. ತೆಗೆದಿಡಲಾಗಿತ್ತು. ಎನ್‌ಪಿಎ ನಿಭಾಯಿಸಲು ತೆಗೆದಿಡಲಾಗುತ್ತಿರುವ ಮೊತ್ತ ಹೆಚ್ಚುತ್ತಿರುವುದರಿಂದ ಬ್ಯಾಂಕ್‌ನ ಲಾಭಕ್ಕೆ ಹೊಡೆತ ಬಿದ್ದಿದೆ.

ಪಿಎನ್‌ಬಿ ನಷ್ಟದ ವರದಿ ಪ್ರಕಟವಾದ ಬಳಿಕ ಬ್ಯಾಂಕ್‌ನ ಷೇರುಗಳು ಶೇ.1.01ರಷ್ಟು ಕುಸಿದಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ