ಬೆಂಗಳೂರು,ನ.3- ಹೊಸಕೆರೆಹಳ್ಳಿ ಕೆರೆ ಪರಿಶೀಲನೆಗೆ ಬಂದ ಮೇಯರ್ ಗಂಗಾಂಬಿಕೆ ಅವರನ್ನು ಸ್ಥಳೀಯರು ತೀವ್ರ ತರಾಟೆಗೆ ತೆಗೆದುಕೊಂಡರು
ಕಳೆದ ಮೂರು ವರ್ಷಗಳಿಂದ ಕಾಮಗಾರಿ ಕುಂಟುತಾ ಸಾಗುತ್ತಿದೆ. ಸ್ಯಾನಿಟರಿ ನೀರು ರಸ್ತೆಗೆ ಬರುತ್ತಿದೆ. ಮಳೆ ಬಂದಾಗಂತೂ ಇಲ್ಲಿ ವಾಸಿಸಲು ಸಾಧ್ಯವಾಗುವುದಿಲ್ಲ. ನಾವು ಬದುಕುವುದಾದರೂ ಹೇಗೆ ಎಂದು ಕಿಡಿಕಾರಿದರು.
ರಾಜಕಾಲುವೆ ಸಮರ್ಪಕ ನಿರ್ವಹಣೆ ಮಾಡದ ಕಾರಣ ನೀರು ಸರಾಗವಾಗಿ ಹೋಗದೆ ಅಲ್ಲೇ ನಿಂತಿರುತ್ತದೆ. ಅಕ್ಕಪಕ್ಕದ ವಾರ್ಡ್ಗಳಿಂದ ಹೊಸಕೆರೆಹಳ್ಳಿ ಕೆರೆಗೆ ಕೊಳಚೆ ನೀರು ಬಂದು ಸೇರುತ್ತಿದೆ. ಇದರಿಂದ ನೀರು ಕಲುಷಿತಗೊಂಡು ಗಬ್ಬು ವಾಸನೆ ಬೀರುತ್ತಿದೆ. ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿದೆ. ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಕೆರೆ ತ್ಯಾಜ್ಯ ನಿರ್ವಹಣೆಯಲ್ಲಿ ಗುತ್ತಿಗೆದಾರರು ಅಸಡ್ಡೆ ತೋರುತ್ತಿದ್ದಾರೆ. ಯಾವುದೇ ಅಧಿಕಾರಿಗಳು ಇತ್ತ ತಿರುಗಿ ನೋಡುವುದಿಲ್ಲ ಎಂದು ದೂರಿದರು.
ಇದೇ ವೇಳೆ ಶಾರದಾ ಪಬ್ಲಿಕ್ ಸ್ಕೂಲ್ನ ವಿದ್ಯಾರ್ಥಿನಿ ರುಚಿತ ಮೇಯರ್ ಅವರ ಗಮನಸೆಳೆದು ಹೊಸಕೆರೆಹಳ್ಳಿ ಕೆರೆಯಿಂದ ಬರುವ ವಾಸನೆಯನ್ನು ತಡೆದುಕೊಳ್ಳಲಾಗುತ್ತಿಲ್ಲ. ನಮ್ಮ ಶಾಲೆಯಲ್ಲಿ ಉತ್ತಮವಾಗಿ ಓದುವ ಮಕ್ಕಳಿದ್ದೇವೆ. ಈ ಕೆರೆ ವಾಸನೆಯಿಂದ ನಮಗ್ಯಾರಿಗೂ ಪಾಠ ಕೇಳಲಾಗುತ್ತಿಲ್ಲ ಜೊತೆಗೆ ನಮ್ಮ ಆರೋಗ್ಯ ಕೂಡ ಹಾಳಾಗುತ್ತಿದೆ. ಚರ್ಮದ ಅಲರ್ಜಿ ಹೆಚ್ಚಾಗುತ್ತಿದೆ ಎಂದು ಅಳಲು ತೋಡಿಕೊಂಡಳು.
ಕೂಡಲೇ ಈ ಕೆರೆ ಸಮಸ್ಯೆಯನ್ನು ಬಗೆಹರಿಸಬೇಕೆಂದು ವಿದ್ಯಾರ್ಥಿನಿ ಸೇರಿದಂತೆ ಸ್ಥಳೀಯ ಜನರು ಮೇಯರ್ ಅವರನ್ನು ಒತ್ತಾಯಿಸಿದರು.
ಕೆರೆ ವೀಕ್ಷಣೆ ವೇಳೆ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಹಾಗೂ ಅಧಿಕಾರಿಗಳು ಹಾಜರಿದ್ದರು.