ವಿ.ಎಸ್.ಉಗ್ರಪ್ಪ ಅವರ ಮನೆಯಲ್ಲಿನ ಚಿರಾಸ್ತಿಗಳನ್ನು ಜಪ್ತಿ ಮಾಡಲು ನ್ಯಾಯಾಲಯ ಆದೇಶ

ಬೆಂಗಳೂರು, ನ.2-ಅಪಘಾತ ಪ್ರಕರಣದಲ್ಲಿ ಗಾಯಾಳುಗೆ ಪರಿಹಾರದ ಮೊತ್ತ ಪಾವತಿಸದೆ ಸತಾಯಿ ಸುತ್ತಿರುವ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಅವರ ಮನೆಯಲ್ಲಿನ ಚಿರಾಸ್ತಿಗಳನ್ನು ಜಪ್ತಿ ಮಾಡಲು ನ್ಯಾಯಾಲಯ ಆದೇಶ ನೀಡಿದೆ.

2010ರಲ್ಲಿ ಉಗ್ರಪ್ಪ ಅವರ ಕ್ವಾಲಿಸ್ ಕಾರು ದೊಡ್ಡಬಳ್ಳಾಪುರದಲ್ಲಿ ಹಿಂಬದಿ ಚಲಿಸುವಾಗ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ವಾಹನ ಸವಾರ ಬಾಲಾಜಿ ಗಂಭೀರ ಗಾಯಗೊಂಡಿದ್ದರು. ಪ್ರಕರಣದ ನ್ಯಾಯಾಲಯದ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ದೊಡ್ಡಬಳ್ಳಾಪುರ ನ್ಯಾಯಾಲಯ 62 ಸಾವಿರ ರೂ. ಪರಿಹಾರ ಪಾವತಿಸುವಂತೆ ಆದೇಶ ನೀಡಿತ್ತು.

ಉಗ್ರಪ್ಪ ಅವರ ಕಾರಿಗೆ ವಿಮೆ ಇಲ್ಲದಿದ್ದರಿಂದ ವೈಯಕ್ತಿಕ ಪರಿಹಾರ ಪಾವತಿಸುವ ಅನಿವಾರ್ಯತೆ ಎದುರಾಗಿತ್ತು. ಆದರೆ ಉಗ್ರಪ್ಪ ಪರಿಹಾರ ಪಾವತಿಸಿರಲಿಲ್ಲ ಎನ್ನಲಾಗಿದೆ. ಗಾಯಾಳು ಆಗಿದ್ದ ಬಾಲಾಜಿ ಅವರು ಜಿಲ್ಲಾ ಮಟ್ಟದ ಸೆಷನ್ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ನೋಟೀಸ್ ನೀಡಿತ್ತು. ಆದರೆ ಉಗ್ರಪ್ಪ ವಿಚಾರಣೆಗೂ ಹಾಜರಾಗದೆ, ಪರಿಹಾರವೂ ಪಾವತಿಸದಿದ್ದರಿಂದ ನ್ಯಾಯಾಧೀಶರು ಚರಾಸ್ತಿ ಜಪ್ತಿಗೆ ಆದೇಶ ನೀಡಿದ್ದಾರೆ.
ವಿಧಾನಪರಿಷತ್ ಸದಸ್ಯರಾಗಿರುವ ಉಗ್ರಪ್ಪ ಅವರು ಪ್ರಸ್ತುತ ಲೋಕಸಭೆಗೆ ನಡೆಯುತ್ತಿರುವ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ನಿನ್ನೆಯಷ್ಟೆ ಉಗ್ರಪ್ಪ ಮೇಲೆ ಮಹಿಳೆಯರು ನ್ಯಾಯ ಕೊಡಿಸಲಿಲ್ಲವೆಂದು ಆರೋಪಿಸಿದ ಬೆನ್ನಲ್ಲೇ ನ್ಯಾಯಾಲಯ ಜಪ್ತಿಗೆ ಆದೇಶ ನೀಡಿದೆ. ನಾಳೆ ಚುನಾವಣೆ ನಡೆಯಲಿದ್ದು, ಜಪ್ತಿ ಆದೇಶ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಆತಂಕ ಎದುರಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ