ದೇಶದಲ್ಲಿ ಆರ್ಥಿಕ ಭ್ರಷ್ಟತೆ ಮಾತ್ರವಲ್ಲ, ಬೌದ್ಧಿಕ ಭ್ರಷ್ಟತೆಯೂ ಇದೆ: ಸಾಹಿತಿ ಬರಗೂರು ರಾಮಚಂದ್ರಪ್ಪ

ಬೆಂಗಳೂರು, ನ.2- ದೇಶದಲ್ಲಿ ಆರ್ಥಿಕ ಭ್ರಷ್ಟತೆ ಮಾತ್ರವಲ್ಲ, ಬೌದ್ಧಿಕ ಭ್ರಷ್ಟತೆಯೂ ಇದ್ದು, ಈ ವಲಯದ ಭ್ರಷ್ಟತೆಯಲ್ಲಿ ಯಾವುದು ಸತ್ಯ, ಯಾವುದು ಅಸತ್ಯ ಎಂದು ನೋಡದೆ ಬೌದ್ಧಿಕ ಭ್ರಷ್ಟತೆ ತಾಂಡವವಾಡುತ್ತಿದೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ವಿಶ್ಲೇಷಿಸಿದರು.

ಕರ್ನಾಟಕ ಸಂಸ್ಕøತ ವಿವಿ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಯೋಗದಲ್ಲಿ ಡಾ.ಅಂಬೇಡ್ಕರ್ ಮತ್ತು ಇತರ ಮಹಾಪುರುಷರ ತೌಲನಿಕ ಅಧ್ಯಯನ ಕುರಿತಾದ ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಪಕ್ಷಪಾತ, ಜಾತಿ ಪರ, ಧರ್ಮ ಪರವಾಗಿ ವಿಚಾರಗಳು ಪ್ರತಿಪಾದನೆಯಾಗುತ್ತಿವೆ. ತತ್ವ ಆಧಾರಿತ ಅನುಸಂಧಾನ ಬೇರೆ, ಅಭಿಪ್ರಾಯವೇ ಬೇರೆ. ಎಲ್ಲೆಡೆ ಸಮಯ ಸಾಧಕ ರಾಜಕಾರಣ ಆವರಿಸಿದೆ. ಭಿನ್ನಾಭಿಪ್ರಾಯಗಳು ವ್ಯಕ್ತಿ ನಿಂದನೆಗೆ ಮಾತ್ರ ಸೀಮಿತವಾಗದೆ ಬಲಿಯ ಹಂತಕ್ಕೂ ತಲುಪಿದೆ ಎಂದು ವಿಷಾದಿಸಿದರು.

ಪಕ್ಷಾತೀತ, ಧರ್ಮಾತೀತವಾದ ಚಿಂತನೆಗಳು ಬಲಿ ಕೇಳುವುದಿಲ್ಲ. ಮಹಾನ್ ಸಾಧಕರು ಇನ್ನೊಬ್ಬರನ್ನು ಸಾಧನವಾಗಿ ಬಳಸುವುದು ತಪ್ಪಬೇಕು. ಮಹಾತ್ಮಗಾಂಧೀಜಿಯವರು ಹಿಂದೆ ಧರ್ಮದ ಒಳಗಿನಿಂದಲೇ ತಮ್ಮ ಚಿಂತನೆಯನ್ನು ಪ್ರತಿಪಾದಿಸಿದ್ದರು. ಅಂಬೇಡ್ಕರ್ ಅವರು ಹಿಂದೂ ಧರ್ಮದ ಹೊರಗಿನಿಂದ ತಮ್ಮ ಚಿಂತನೆಯನ್ನು ಪ್ರತಿಪಾದಿಸಿದರು. ಅಂಬೇಡ್ಕರ್ ಅವರದು ಸಾಮಾಜಿಕ ಪರಿಭಾಷೆ. ಗಾಂಧೀಜಿಯವರದು ಆಧ್ಯಾತ್ಮಿಕ ಪರಿಭಾಷೆ ಎಂದು ಪ್ರತಿಪಾದಿಸಿದರು.

ನಾಯಕ ಮತ್ತು ಖಳನಾಯಕನ ಆಚೆಗೆ ತಾತ್ವಿಕ ಅಧ್ಯಯನ ಇರಬೇಕು. ಅಂಬೇಡ್ಕರ್ ಓರ್ವ ವಿದ್ವಾಂಸ, ಚಿಂತಕ, ಹೋರಾಟಗಾರರೂ ಆಗಿದ್ದರು ಎಂದು ಹೇಳಿದರು.
ಸಂಸ್ಕøತ ವಿವಿ ಕುಲಪತಿ ಪದ್ಮಶೇಖರ್, ಡಾ.ನಂಜುಂಡಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಛಲವಾದಿ, ಎನ್‍ಎಸ್‍ಎಸ್ ಕೋಶದ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಸಂತೋಷ್ ಹಾನಗಲ್ಲ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ