ಜನಾರ್ದನರೆಡ್ಡಿ ಅವರನ್ನು ಬಿಜೆಪಿಯಿಂದ ವಜಾ ಮಾಡಬೇಕೆಂದು ಕಾಂಗ್ರೆಸ್ ಮುಖಂಡರ ಪ್ರತಿಭಟನೆ

ಬೆಂಗಳೂರು, ನ.2- ಶಾಪದ ಹೇಳಿಕೆ ನೀಡಿ ಸಿದ್ದರಾಮಯ್ಯನವರ ಮಗನ ಸಾವನ್ನು ಸಂಭ್ರಮಿಸಿದ ಗಾಲಿ ಜನಾರ್ದನರೆಡ್ಡಿ ಅವರನ್ನು ಬಿಜೆಪಿಯಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು.

ಕೆಪಿಸಿಸಿ ಪ್ರಚಾರ ಸಮಿತಿ ಬೆಂಗಳೂರು ಕೇಂದ್ರ ಜಿಲ್ಲಾ ವತಿಯಿಂದ ಪ್ರತಿಭಟನೆ ನಡೆಸಿದ ಮುಖಂಡರು, ಚುನಾವಣೆಯಲ್ಲಿ ಪರಸ್ಪರ ಆರೋಪಗಳು, ಟೀಕೆಗಳು ಸಹಜ. ಆದರೆ, ವೈಯಕ್ತಿಕ ನಿಂದನೆ ಮಾಡುವುದು ಎಷ್ಟು ಸಮಂಜಸ. ಅದರಲ್ಲೂ ಮಗನ ಸಾವನ್ನು ಶಾಪವೆಂದು ಹೇಳಿ ಸಿದ್ದರಾಮಯ್ಯನವರ ಮನಸ್ಸಿಗೆ ಘಾಸಿ ಉಂಟುಮಾಡಿರುವ ಜನಾರ್ದನರೆಡ್ಡಿ ಅವರ ಹೇಳಿಕೆಯನ್ನು ಖಂಡಿಸುತ್ತೇವೆ ಎಂದು ಪ್ರಚಾರ ಸಮಿತಿ ಅಧ್ಯಕ್ಷ ಜಿ.ಜನಾರ್ದನ್ ಹೇಳಿದ್ದಾರೆ.

ವ್ಯಕ್ತಿಗತ ಹಾಗೂ ಸಾವಿನ ವಿಷಯ ಪ್ರಸ್ತಾಪಿಸಿರುವ ಗಣಿ ಹಗರಣದ ರೂವಾರಿ ರೆಡ್ಡಿ ಅವರನ್ನು ಬಿಜೆಪಿಯಿಂದ ಹೊರಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಹಸಿವು ಮುಕ್ತ, ಭ್ರಷ್ಟ ಮುಕ್ತ ಆಡಳಿತ ನೀಡಿದ್ದಾರೆ. ಆದರೂ ರೆಡ್ಡಿ ಅವರು ಭಯದ ವಾತಾವರಣ ಸೃಷ್ಟಿಸಿ ತಾವು ಮಾಡಿದ ತಪ್ಪಿಗೆ ಜೈಲುವಾಸ ಅನುಭವಿಸಿ ಅದನ್ನು ಸಿದ್ದರಾಮಯ್ಯನವರ ಮೇಲೆ ಹೊರಿಸುವ ಪ್ರಯತ್ನ ಮಾಡಿದ್ದಾರೆ ಎಂದು ಕವಿಕಾ ಮಾಜಿ ಅಧ್ಯಕ್ಷ ಎಸ್.ಮನೋಹರ್ ಆರೋಪಿಸಿದ್ದಾರೆ.

ರೆಡ್ಡಿ ಅವರ ಅಕ್ರಮ ಗಣಿಗಾರಿಕೆ ಬಗ್ಗೆ ಲೋಕಾಯುಕ್ತ ಸಂಸ್ಥೆ ಕೇಂದ್ರ ಜಾಗೃತ ದಳ, ಕೇಂದ್ರ ತನಿಖಾ ಸಂಸ್ಥೆಗಳು ತನಿಖೆ ನಡೆಸಿ ಬಹಿರಂಗಪಡಿಸಿರುವುದು ಬಿಜೆಪಿಗೆ ಮಾಹಿತಿ ಇಲ್ಲವೆ? ಬಿಜೆಪಿ ಏಕೆ ಅವರ ಬಗ್ಗೆ ಕ್ರಮ ಕೈಗೊಂಡಿಲ್ಲ? ಜನಾರ್ದನರೆಡ್ಡಿ ಅವರ ಹೇಳಿಕೆಯನ್ನು ಕೆಲ ಬಿಜೆಪಿ ಮುಖಂಡರು ಟೀಕಿಸಿರುವುದನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ರೆಡ್ಡಿ ಪ್ರತಿಕೃತಿ ಸಹಿಸಲಾಯಿತು. ಪರಿಸರ ರಾಮಕೃಷ್ಣ, ಶೇಖರ್, ಸುಧಾಕರ್, ರವಿಶೇಖರ್, ದರ್ಶನ್, ಹೇಮರಾಜ್, ಆದಿ, ಬಾಬು ಮುಂತಾದವರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ