ನಾಳೆಯಿಂದ ನ.5ರವರೆಗೆ ಪಟಾಕಿ ಬಿಟ್ಹಾಕಿ ಜಾಗೃತಿ ಜಾಥಾ

ಬೆಂಗಳೂರು, ನ.2-ಬಿಕ್ಲಿಪ್ ಅಲುಮ್ನಿ ಅಸೋಸಿಯೇಷನ್ ವತಿಯಿಂದ ನಾಳೆ (ನ.3) ಯಿಂದ ನ.5ರವರೆಗೆ ಪಟಾಕಿ ಬಿಟ್ಹಾಕಿ ಎಂಬ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಮುಖ್ಯಸ್ಥ ಟಿ.ಎಸ್.ಸುಬ್ಬಯ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಸ, ಮಾಲಿನ್ಯ, ಸಂಚಾರ ಮತ್ತಿತರ ಹಲವು ಸಮಸ್ಯೆಗಳನ್ನು ನಾವು ಪ್ರತಿದಿನ ಎದುರಿಸುತ್ತಿದ್ದೇವೆ. ಈಗ ದೀಪಾವಳಿ ಹಬ್ಬದ ಆಚರಣೆಯಿಂದ ಮತ್ತಷ್ಟು ಪರಿಸರ ಮಾಲಿನ್ಯ ಉಂಟಾಗಲಿದೆ. ಆದ್ದರಿಂದ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಾಗೃತಿ ಜಾಥಾ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಬೀದಿನಾಟಕಗಳ ಮೂಲಕ ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ಉತ್ತೇಜಿಸಲಾಗುವುದು.
ಸಿನಿಮಾ, ಕ್ರೀಡೆ, ರಾಜಕೀಯ ಕ್ಷೇತ್ರದ ಪ್ರಭಾವಿ ವ್ಯಕ್ತಿಗಳ ಮೂಲಕ ಪರಿಸರ ಸ್ನೇಹಿ ದೀಪಾವಳಿ ಬಗ್ಗೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳ ಮುಖಾಂತರ ಬಿತ್ತರಿಸಿ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

ಸ್ವಚ್ಛ ಬೆಂಗಳೂರು ಸಂಕಲ್ಪದೊಂದಿಗೆ ಹಮ್ಮಿಕೊಂಡಿರುವ ಈ ಕಾರ್ಯಕ್ರಮದ ಮೂಲಕ ನಗರದಲ್ಲಿ ಶೇ.50ರಷ್ಟು ಕಸ, ಮಾಲಿನ್ಯ ಕಡಿಮೆ ಮಾಡುತ್ತೇವೆ ಎಂದು ತಿಳಿಸಿದರು.
ನಮ್ಮ ಜಾಥಾಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ, ರಾಜ್ಯ ಸರ್ಕಾರ ಕೈಜೋಡಿಸಲಿವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸದಸ್ಯರಾದ ಆನಂದ್ ನಿಸರ್ಗ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ