ಬೆಂಗಳೂರು, ನ.2-ಮಾಹಿತಿಗಳನ್ನು ನೇರವಾಗಿ ಮತ್ತು ತ್ವರಿತವಾಗಿ ತಲುಪಿಸಲು ಇ-ವಿಧಾನ ಯೋಜನೆ ಹೆಚ್ಚು ಅನುಕೂಲಕರವಾಗಿದೆ. ಇದನ್ನು ಜಾರಿಗೆ ತರಲು ಅಧಿಕಾರಿ ವರ್ಗ ಶ್ರಮಿಸಬೇಕಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಡಿಜಿಟಲ್ ಇಂಡಿಯಾ ಯೋಜನೆಯಡಿ ವಿಧಾನಸಭೆ ಮತ್ತು ವಿಧಾನಪರಿಷತ್ ಸಚಿವಾಲಯದ ಸಿಬ್ಬಂದಿಗೆ ರಾಷ್ಟ್ರೀಯ ಇ-ವಿಧಾನ ಅಡಿಯಲ್ಲಿ ಏರ್ಪಡಿಸಲಾಗಿದ್ದ ಪುನರ್ ಮನನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೇರವಾಗಿ ಹಾಗೂ ತ್ವರಿತವಾಗಿ ಮಾಹಿತಿ ತಲುಪಿಸುವ ಜೊತೆಗೆ 100ರಷ್ಟು ಫಲಿತಾಂಶ ಪಡೆಯಲು ಈ ಯೋಜನೆಯಿಂದ ಸಾಧ್ಯ. ಹಿಮಾಚಲ ಪ್ರದೇಶದಲ್ಲಿ ಈ ಯೋಜನೆ ಮೊದಲಿಗೆ ಜಾರಿಯಾಗಿದ್ದು, ರಾಜ್ಯದಲ್ಲೂ ಆರಂಭಿಸಿರುವ ಯೋಜನೆಯಿಂದಾಗಿ ದೇಶದಲ್ಲೇ ಉತ್ತಮ ಕಾರ್ಯಕ್ರಮಕ್ಕೂ ಮಾದರಿಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರದ ರಾಜ್ಯ ಮಾಹಿತಿ ಅಧಿಕಾರಿ ವಿನಾಯಕ್ ಇ-ವಿಧಾನ ಅಳವಡಿಕೆ, ಮೊಬೈಲ್ ಆ್ಯಪ್ ಮೂಲಕ ಬಳಕೆ ಸೇರಿದಂತೆ ಇನ್ನಿತರ ತಾಂತ್ರಿಕ ವಿಚಾರಗಳ ಬಗ್ಗೆ ಮಾಹಿತಿ ಒದಗಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರದ ಕಾರ್ಯದರ್ಶಿ ವಿಜಯ್ಭಾಸ್ಕರ್, ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.