ಬೆಂಗಳೂರು, ನ.2- ನಿಮಗೆ ಕೆಲಸ ಮಾಡಲು ಆಸಕ್ತಿ ಇಲ್ವಾ? ಮಾಡೋ ಹಾಗಿದ್ದರೆ ಸರಿಯಾಗಿ ಕೆಲಸ ಮಾಡಿ. ಇಲ್ಲದಿದ್ದರೆ ಎಲ್ಲಿಂದ ಬಂದ್ರೋ ಅಲ್ಲಿಗೆ ವಾಪಸ್ ಹೋಗಿಬಿಡಿ ಎಂದು ಬೆಂಗಳೂರು ನಗರಾಭಿವೃದ್ದಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಧಿಕಾರಿಗಳನ್ನು ಇಂದು ತೀವ್ರ ತರಾಟೆಗೆ ತೆಗೆದುಕೊಂಡರು.
ಇನ್ನು ಮುಂದೆ ನಗರದಲ್ಲಿ ಎಲ್ಲೂ ಕಸ ಕಾಣಬಾರದು. ಕಸ ಕಂಡರೆ ತಕ್ಷಣ ತೆರವು ಮಾಡಬೇಕು. ಬ್ಲ್ಯಾಕ್ ಸ್ಪಾಟ್ಸ್ ಇರಬಾರದು ಎಂದು ಹೈಕೋರ್ಟ್ ಛಾಟಿ ಬೀಸಿದ ಹಿನ್ನೆಲೆಯಲ್ಲಿ ಡಾ.ಜಿ.ಪರಮೇಶ್ವರ್ ಇಂದು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕದ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.
ಪದೇ ಪದೇ ನ್ಯಾಯಾಲಯ ಛಾಟಿ ಬೀಸುತ್ತಲೇ ಇದೆ. ನೀವು ಏನು ಕ್ರಮ ಕೈಗೊಂಡಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ವಿಶೇಷ ಆಯುಕ್ತ ರಂದೀಪ್, ಹಿರಿಯ ಅಧಿಕಾರಿ ಸರ್ಫ್ರಾಜ್ ಖಾನ್ ಮತ್ತಿತರರು ಜಮಾಯಿಷಿ ನೀಡಲು ಮುಂದಾದಾಗ ನಿಮಗೆ ಕೆಲಸ ಮಾಡೋಕೆ ಬರಲ್ಲಾ ರೀ… ನಿಮಗೆ ಆದ್ರೆ ಕೆಲ್ಸ ಮಾಡಿ, ಕಸ ಮುಕ್ತ ಬೆಂಗಳೂರು ಮಾಡಬೇಕೆಂಬ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಇಲ್ಲದಿದ್ದರೆ ವಾಪಸ್ ಹೋಗಿಬಿಡಿ ಎಂದು ಗುಡುಗಿದರು.
ವಾರ್ಡ್ ವೈಸ್ ಕಸ ವಿಲೇವಾರಿ ಟೆಂಡರ್ ಕರೆಯಬೇಕು. ಖಾಸಗಿ ಸಹಭಾಗಿತ್ವ ಇರಬೇಕು. ಸಾರ್ವಜನಿಕ ಸ್ಥಳದಲ್ಲಿ ಯಾರೇ ಕಸ ಎಸೆದರೂ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸುಮಾರು ಎರಡು ಗಂಟೆಗಳ ಕಾಲ ಪರಮೇಶ್ವರ್ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.
ಕಸದ ಅವ್ಯವಹಾರದ ಬಗ್ಗೆ ಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳೋಣ ಎಂದು ಅವರು ಹೇಳಿದ್ದಾರೆ.