ಬೆಂಗಳೂರು,ನ.1- ದಲಿತರ ಮೂಲಭೂತ ಹಕ್ಕುಗಳ ಅನುಷ್ಠಾನ ಮತ್ತು ಈಡೇರಿಕೆಗೆ ಆಗ್ರಹಿಸಿ ಅಂಬೇಡ್ಕರ್ ಸೇನೆ ನೇತೃತ್ವದಲ್ಲಿ ನಿನ್ನೆ ವಿಧಾನಸೌಧ ಚಲೋ ಪ್ರತಿಭಟನೆ ನಡೆಸಲಾಯಿತು.
ನಗರದ ಸಿಟಿ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವನದವರೆಗೆ ಅಂಬೇಡ್ಕರ್ ಸೇನೆಯ ಅಸಂಖ್ಯಾತ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೇನೆ ಅಧ್ಯಕ್ಷ ಪಿ.ಮೂರ್ತಿ ದಲಿತರ ಹಕ್ಕುಗಳ ರಕ್ಷಣೆಗೆ ಮಾಡಿರುವ ಕಾಯ್ದೆ-ಕಾನೂನುಗಳಿಗೆ ಸೂಕ್ತ ನಿಯಮಗಳನ್ನು ರೂಪಿಸಬೇಕು. ದಲಿತರಿಗಾಗಿ ಆರ್ಥಿಕ ಸಂಪನ್ಮೂಲ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ದಲಿತರನ್ನು ಸಮಾಜದ ಮುಖ್ಯ ವಾಹಿನಿಯಿಂದ ದೂರವಿಡುವ ಪ್ರಯತ್ನಗಳು ನಡೆಯುತ್ತಿವೆ. ಇದು ಬದಲಾಗಬೇಕು ಎಂದು ಮೂರ್ತಿ ಆಗ್ರಹಿಸಿದರು.