ಮನೆಯಲ್ಲಿ ಕನ್ನಡ ಪುಸ್ತಕಗಳ ಗ್ರಂಥ ಭಂಡಾರ ಹೊಂದಿದರೆ ಕನ್ನಡವನ್ನು ಬೆಳೆಸಿ, ಕನ್ನಡ ವಾತಾವರಣ ನಿರ್ಮಿಸಲು ಸಾಧ್ಯ: ಖ್ಯಾತ ಸಾಹಿತಿ ಮಲ್ಲೇಪುರ ಟಿ. ವೆಂಕಟೇಶ್

Varta Mitra News

ಬೆಂಗಳೂರು, ನ. 1- ಕನ್ನಡ ಪುಸ್ತಕಗಳು ಚಿನ್ನ, ಬೆಳ್ಳಿ, ವಜ್ರ, ವೈಡೂರ್ಯಕ್ಕಿಂತ ಮಿಗಿಲಾದದ್ದು. ಹಾಗಾಗಿ ಪ್ರತಿಯೊಬ್ಬರು ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳುವ ಜತೆಗೆ ಮನೆಯಲ್ಲಿ ಕನ್ನಡ ಪುಸ್ತಕಗಳ ಗ್ರಂಥ ಭಂಡಾರ ಹೊಂದಿದರೆ ಕನ್ನಡವನ್ನು ಬೆಳೆಸಿ, ಕನ್ನಡ ವಾತಾವರಣ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಹಾಗೂ ಖ್ಯಾತ ಸಾಹಿತಿ ಮಲ್ಲೇಪುರ ಟಿ. ವೆಂಕಟೇಶ್ ಹೇಳಿದರು.

ನಗರದಲ್ಲಿಂದು ಡಿಎಸ್- ಮ್ಯಾಕ್ಸ್ ಕಟ್ಟಡ ನಿರ್ಮಾಣ ಸಂಸ್ಥೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಸಾಹಿತ್ಯ ಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಕನ್ನಡ ಪುಸ್ತಕಗಳನ್ನು ಕೊಂಡು ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಮನೆಯಲ್ಲೇ ಸಣ್ಣ ಗ್ರಂಥ ಭಂಡಾರ ಸ್ಥಾಪಿಸುವ ಮೂಲಕ ಮುಂದಿನ ಪೀಳಿಗೆಗೂ ಕನ್ನಡದ ಪುಸ್ತಕಗಳ ಪರಿಚಯ ಮಾಡಿಕೊಡಿ. ಇದರಿಂದ ಕನ್ನಡ ಬೆಳೆಸುವ ಜತೆಗೆ ಎಲ್ಲೆಡೆ ಕನ್ನಡದ ವಾತಾವರಣವನ್ನು ನಿರ್ಮಿಸಬಹುದು ಎಂದರು.

ಎಲ್ಲರೂ ಚಿನ್ನ, ವಜ್ರ, ವೈಡೂ¾್ಯಗಳನ್ನು ಕೊಳ್ಳುತ್ತಾರೆ. ನನ್ನ ಪ್ರಕಾರ ಕನ್ನಡ ಪುಸ್ತಕಗಳು ಇದಕ್ಕಿಂತ ಮಿಗಿಲು. ಹಾಗಾಗಿ ಎಲ್ಲರೂ ಕನ್ನಡ ಪುಸ್ತಕಗಳನ್ನು ಕೊಂಡು ಓದಬೇಕು ಎಂದು ಅವರು ಹೇಳಿದರು.
ಪ್ರತಿಯೊಬ್ಬರು ಯಾವುದಾದರೂ ಒಂದು ಕನ್ನಡದ ಪತ್ರಿಕೆಗಳನ್ನು ಮನೆಗೆ ತರಿಸಿಕೊಳ್ಳಬೇಕು. ಇದು ಕನ್ನಡದ ಓದಿನ ಅರಿವನ್ನು ವಿಸ್ತರಿಸುವ ಜತೆಗೆ ಮಕ್ಕಳಿಗೂ ಜ್ಞಾನಾರ್ಜನೆಗೆ ಅವಕಾಶ ನೀಡುತ್ತದೆ ಎಂದರು.

ಕನ್ನಡ ರಾಜ್ಯೋತ್ಸವ ಇಡೀ ನವೆಂಬರ್ ತಿಂಗಳು ನಡೆಯುವ ಕನ್ನಡದ ಹಬ್ಬ. ಈ ಹಬ್ಬದಲ್ಲಿ ಎಲೆಮರೆ ಕಾಯಿಯಂತೆ ಕನ್ನಡ ಸೇವೆ ಮಾಡುವ ಸಾಹಿತಿಗಳು, ಕಲಾವಿದರು, ಸಂಗೀತಗಾರರು, ಬರಹಗಾರರನ್ನು ಗುರುತಿಸಿ ಸನ್ಮಾನ ಮಾಡುವುದು ನಿಜಕ್ಕೂ ದೊಡ್ಡ ಕಾರ್ಯ ಎಂದು ಹೇಳಿದರು.
ನವೆಂಬರ್ ತಿಂಗಳಿನಲ್ಲಿ ರಾಜ್ಯದ ಎಲ್ಲೆಡೆ ರಾಜ್ಯ ಸರ್ಕಾರದ ಜತೆಗೆ ಹಲವು ಸಂಘ ಸಂಸ್ಥೆಗಳು ಸಾಹಿತಿ ಕಲಾವಿದರನ್ನು ಸನ್ಮಾನಿಸುವ ಒಳ್ಳೆಯ ಕೆಲಸ ಮಾಡುತ್ತಿವೆ. ಡಿಎಸ್ ಮ್ಯಾಕ್ಸ್ ಸಂಸ್ಥೆ ಸಹ ಎಲೆಮರೆಯಲ್ಲಿರುವ ಸಾಹಿತಿಗಳನ್ನು ಗುರುತಿಸಿ ಅವರನ್ನು ಗೌರವಿಸುತ್ತಿರುವುದು ನಿಜಕ್ಕೂ ಮೆಚ್ಚುವಂತಹದ್ದು ಎಂದರು.

ಈ ಸಮಾರಂಭದಲ್ಲಿ ದೊಡ್ಡ ದೊಡ್ಡ ವಿದ್ವಾಂಸರು, ಸಾಹಿತಿಗಳನ್ನು ಸನ್ಮಾನಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮಲ್ಲೇಪುರಂ ಟಿ. ವೆಂಕಟೇಶ್ ಅವರು, ಉತ್ತರ ಕರ್ನಾಟಕ, ಹೈದರಾಬಾದ್-ಕರ್ನಾಟಕ, ಮಧ್ಯ ಕರ್ನಾಟಕ, ದಕ್ಷಿಣ ಕರ್ನಾಟಕ ಹೀಗೆ ಎಲ್ಲ ಭಾಗದ ಸಾಹಿತಿಗಳನ್ನು ಕರೆದು ಗೌರವಿಸಿರುವ ಕೆಲಸ ಮಾಡಿರುವುದಕ್ಕೆ ಡಿಎಸ್ ಮ್ಯಾಕ್ಸ್ ಸಂಸ್ಥೆಯನ್ನು ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ನಾಡಿನ ಖ್ಯಾತ ಸಾಹಿತಿಗಳಾದ ಪೆÇ್ರ. ಎಂ.ಜಿ. ನಾಗರಾಜ್, ಡಾ. ವೀರಣ್ಣ ರಾಜೂರಾ, ಡಾ. ಡಿ.ಎನ್. ಅಕ್ಕಿ, ಡಾ.ಜಗನ್ನಾಥ್ ಹೆಬ್ಬಾಳೆ, ಪ್ರೇಮಾಭಟ್ ಮತ್ತು ಹೆಚ್.ಟಿ. ಶೈಲಜಾ ಅವರಿಗೆ ಡಿಎಸ್ ಮ್ಯಾಕ್ಸ್ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯು 15 ಸಾವಿರ ರೂ. ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದೆ.

ಡಿಎಸ್ ಮ್ಯಾಕ್ಸ್ ಸಂಸ್ಥೆಯ ಅಧ್ಯಕ್ಷ ಡಾ. ಕೆ.ವಿ. ಸತೀಶ್, ನಿರ್ದೇಶಕ ಎಸ್.ಪಿ. ದಯಾನಂದ್, ಬಸವರಾಜಗುರೂಜಿ, ಉಪನ್ಯಾಸಕ ಹಾಗೂ ಸಾಹಿತಿ ಡಾ. ವೀರಭದ್ರಪ್ಪ ಅಂಚಿನಮನೆ, ಬಿಬಿಎಂಪಿ ಸದಸ್ಯ ಆನಂದ್ ಹಲವು ಗಣ್ಯರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ