ಬೆಂಗಳೂರು,ನ.1- ನಮ್ಮ ನಾಡು-ನುಡಿ, ನಮ್ಮ ತನವನ್ನು ನಾವು ಗೌರವಿಸಬೇಕು ಎಲ್ಲಿಯೂ ಕೂಡ ಬಿಟ್ಟುಕೊಡಬಾರದು ಎಂದು ಹಿರಿಯ ನಟ ಅಂಬರೀಶ್ ತಿಳಿಸಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ ಧ್ವಜಾರೋಹಣ ನೆರವೇರಿಸಿ ಡಾ.ರಾಜ್ಕುಮಾರ್ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೊದಲು ಕನ್ನಡ ಪ್ರೇಮಿಗಳಿಗೆ ಶುಭಾಶಯಗಳು. ಇಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಧಕರಿಗೆ ರಾಜ್ಯೋತ್ಸವದ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಲಾಗಿತ್ತು. ಆದರೆ ಚುನಾವಣೆ ಇರುವುದರಿಂದ ಪ್ರಶಸ್ತಿ ಪ್ರದಾನವನ್ನು ಮುಂದೂಡಲಾಗಿದೆ. ಇದು ಸರಿಯಲ್ಲ. ಕನ್ನಡ ರಾಜ್ಯೋತ್ಸವದ ದಿನದಂದೇ ಪ್ರಶಸ್ತಿ ನೀಡಿದರೆ ಅದಕ್ಕೊಂದು ಅರ್ಥವಿರುತ್ತದೆ ಎಂದರು.
ಕನ್ನಡವನ್ನು ನಾವು ಉಳಿಸಿಬೆಳೆಸಿ ಎಂದು ಕೇಳಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಬೇರೆ ರಾಜ್ಯದಲ್ಲಿ ತಾಯಿ ಭಾಷೆಯನ್ನು ಬಿಟ್ಟುಕೊಡುವುದಿಲ್ಲ. ಹಾಗೆಯೇ ನಾವು ಕೂಡ ನಮ್ಮ ಮಾತೃಭಾಷೆಯನ್ನು ಬಿಟ್ಟುಕೊಡಬಾರದು ಎಂದು ಹೇಳಿದರು.
ನಂತರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಚಿನ್ನೇಗೌಡ ಮಾತನಾಡಿ, ನ.1ರಂದು ಡಾ.ರಾಜ್ಕುಮಾರ್ ಅವರು ವಾಣಿಜ್ಯ ಮಂಡಳಿಗೆ ಆಗಮಿಸಿ ಧ್ವಜಾರೋಹಣ ನೆರವೇರಿಸುತ್ತಿದ್ದರು. ಅಂಬರೀಶ್ ಅವರು ಧ್ವಜಾರೋಹಣ ಮಾಡುವ ಮೂಲಕ ಆ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ ಎಂದರು.
ಈ ಪದ್ಧತಿ ಇನ್ನು ಮುಂದೆಯೂ ಮುಂದುವರೆಯುತ್ತದೆ. ನಮ್ಮ ನಾಡುನುಡಿಯನ್ನು ಉಳಿಸಿ ಬೆಳೆಸುವುದು ನಮ್ಮ ಕೈಯಲ್ಲಿದೆ. ಚಿತ್ರೋದ್ಯಮವನ್ನು ಕೂಡ ಉಳಿಸಿ ಬೆಳೆಸೋಣ ಎಂದು ಹೇಳಿದರು.
ಇದೇ ವೇಳೆ ಅಂಬರೀಶ್ ಅವರಿಗೆ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಕೆ.ವಿ.ಚಂದ್ರಶೇಖರ್, ಸಾ.ರಾ.ಗೋವಿಂದು, ಪದಾಧಿಕಾರಿಗಳಾದ ಭಾಮ ಹರೀಶ್, ಶಿಲ್ಪ ಶ್ರೀನಿವಾಸ್, ಕೆ.ಎಂ.ವೀರೇಶ್ ಮತ್ತಿತರರು ಇದ್ದರು.