ತುಮಕೂರು: ಎಸ್ಸಿ ಎಸ್ಟಿ ಅವರ ಬೇಡಿಕೆ ಈಡೇರಬೇಕಿದ್ದರೆ ಈಗಿರುವ ಸಂಘಟನೆ ಇನ್ನಷ್ಟು ಬಲಿಷ್ಠವಾಗಿ, ನಿಮ್ಮ ಶಕ್ತಿ ಪ್ರದರ್ಶನವಾಗಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಕರೆ ನೀಡಿದರು.
ರಾಜ್ಯ ಸರಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿ ವತಿಯಿಂದ ನೂತನ ಸಚಿವರು ಹಾಗೂ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಹಿಂದಿನಿಂದಲೂ ಎಸ್ಸಿ ಎಸ್ಟಿ ಅವರನ್ನು ಈಗಲೂ ತುಳಿಯುವ ಕೆಲಸವಾಗುತ್ತಿದೆ. ನಮ್ಮ ಯಾವುದೇ ಕೆಲಸವಾಗಬೇಕಿದ್ದರೆ ಅದಕ್ಕೆ ಹೋರಾಟವೇ ಮೂಲ ಮಂತ್ರ. ಸರಕಾರದ ವತಿಯಿಂದ ನಾನು ದಲಿತರ ಪರವಾಗಿ ದನಿ ಎತ್ತುವ ಕೆಲಸ ಮಾಡುತ್ತಿದ್ದೇನೆ. ಇದೇಸಂದರ್ಭದಲ್ಲಿ ದಲಿತ ಸಂಘಟನೆಗಳು ಇನ್ನಷ್ಟು ಬಲಿಷ್ಠವಾಗಿ ತಮ್ಮ ಶಕ್ತಿ ಪ್ರದರ್ಶಿಸಿ ತಮ್ಮ ಕೆಲಸಗಳನ್ನು ಸಾಕಾರಗೊಳಿಸಿಕೊಳ್ಳಬೇಕು ಎಂದರು.
ಬೇರಾವ ರಾಷ್ಟ್ರಗಳಲ್ಲೂ ಜಾತಿ ಸುಳಿವು ಇಲ್ಲ.ಆದರೆ ಭಾರತದಲ್ಲಿ ಜಾತಿ ಬೇರೂರಿದೆ. ಇಂದು ಭಾರತ ಆರ್ಥಿಕವಾಗಿ ಬಲಿಷ್ಠವಾಗುತ್ತಿದ್ದರೂ ಈ ಜಾತಿ ವ್ಯವಸ್ಥೆ ಇದರ ವೇಗಕ್ಕೆ ಕಡಿವಾಣ ಹಾಕುತ್ತಿದೆ. ಈ ವ್ಯವಸ್ಥೆ ತೊಲಗಿಸದ ಹೊರತು ಅಭಿವೃದ್ಧಿ ಅಸಾಧ್ಯ ಎಂದರು.
ಇಂದು ನಾನು ಸ್ವೀಕರಿಸಿದ ಅಭಿನಂದನೆ ಹೋರಾಟದ ಅಸ್ತ್ರವಾಗಿ ಸ್ವೀಕರಿಸಿ ನಿಮ್ಮ ದನಿಯಾಗಿ ಕೆಲಸಮಾಡುವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸದ ಮುದ್ದ ಹನುಮೇಗೌಡ ಇದ್ದರು.