ಬೆಂಗಳೂರು, ಅ.31-ಕನ್ನಡ ವಿರೋಧಿ, ಮತಾಂಧ, ಮೂಲಭೂತ ವಾದಿಯಾದ ಟಿಪ್ಪುಸುಲ್ತಾನ್ ಜಯಂತಿಯನ್ನು ಯಾವುದೇ ಕಾರಣಕ್ಕೂ ಆಚರಿಸಬಾರದೆಂದು ರಾಜ್ಯ ವೀರ ಮದಕರಿ ನಾಯಕ ಗೌರವ ಸಂರಕ್ಷಣಾ ವೇದಿಕೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ವೇದಿಕೆ ಕಾರ್ಯದರ್ಶಿ ಪತಾಪತ್ ಶ್ರೀನಿವಾಸ್ ಮಾತನಾಡಿ, ಟಿಪ್ಪು ಸುಲ್ತಾನ್ ಒಬ್ಬ ಕನ್ನಡ ವಿರೋಧಿ, ಮತಾಂಧ, ಕೊಲೆಗಾರ, ದೇಶದ್ರೋಹಿ ಇಂಥವರ ಜಯಂತಿ ಆಚರಣೆ ಮಾಡುವುದು ಸರಿಯಲ್ಲ ಎಂದರು.
ಚಿತ್ರದುರ್ಗದ 20 ಸಾವಿರಕ್ಕೂ ಹೆಚ್ಚು ಹಿಂದೂಗಳನ್ನು ಬಲವಂತದಿಂದ ಕರೆದೊಯ್ದು ಇಸ್ಲಾಂಗೆ ಮತಾಂತರ ಮಾಡಿದ್ದರು. ಚಿತ್ರದುರ್ಗದ ಖಜಾನೆಯಲ್ಲಿದ್ದ 64 ಲಕ್ಷ ಬೆಳ್ಳಿ, ಚಿನ್ನ, ನಗ ನಾಣ್ಯಗಳನ್ನು ಶ್ರೀರಂಗಪಟ್ಟಣಕ್ಕೆ ಸಾಗಿಸಲಾಗಿತ್ತು. ಈ ಬಗ್ಗೆ ಚಂದ್ರವಳ್ಳಿ ಪುಸ್ತಕದಲ್ಲಿ ಲಕ್ಷ್ಮಣ್ ತೆಲಗಾವಿ ಅವರು ಉಲ್ಲೇಖಿಸಿದ್ದಾರೆ. ಹಾಗಾಗಿ ನ.10 ರಂದು ಆಚರಿಸಲು ನಿರ್ಧರಿಸಲಾಗಿರುವ ಟಿಪ್ಪು ಜಯಂತಿಯನ್ನು ಯಾವುದೇ ಕಾರಣಕ್ಕೂ ಮಾಡಬಾರದೆಂದು ಆಗ್ರಹಿಸಿದರು.
ಚಿತ್ರದುರ್ಗ ಅಧಿದೇವತೆ ಹುಚ್ಚಂಗಿ ಗುಡಿಯ ಮೇಲಿನ ಎರಡು ಅಂತಸ್ತುಗಳನ್ನು ಕೆಡವಿ ಮಸೀದಿ ಕಟ್ಟಿಸಿದರು. ಇಂತಹವರ ಜಯಂತಿ ಆಚರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಚಿತ್ರದುರ್ಗದ ಇತಿಹಾಸಕ್ಕೆ ಟಿಪ್ಪು ಒಂದು ಕಪ್ಪು ಚುಕ್ಕೆ. ಇಂತಹ ಒಬ್ಬ ನರಹಂತಕನ ಮತಾಂಧನ ಜಯಂತಿಯನ್ನು ಯಾವ ಆದರ್ಶ ಕೊಡಲು ಸರ್ಕಾರ ಮಾಡುತ್ತಿದೆಯೋ ಅರ್ಥವಾಗುತ್ತಿಲ್ಲ ಎಂದರು.
ಲಕ್ಷಾಂತರ ಹಿಂದೂ ದೇವಾಲಯಗಳನ್ನು ಹಾಳು ಮಾಡಿರುವ ಟಿಪ್ಪು ಜಯಂತಿಯನ್ನು ಸರ್ಕಾರ ತೆರಿಗೆ ಹಣದಲ್ಲಿ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿ ಆಚರಿಸಿ ಅಧಿಕಾರ ಕಳೆದುಕೊಂಡಿದ್ದಾರೆ.ಅದೇ ರೀತಿ ಈ ಬಾರಿ ಟಿಪ್ಪು ಜಯಂತಿ ಆಚರಿಸಿದ್ದೇ ಆದಲ್ಲಿ ಕುಮಾರಸ್ವಾಮಿ ಅವರೂ ಕೂಡ ಮುಂದಿನ ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುವ ಪರಿಸ್ಥಿತಿ ಬಂದೊದಗಬಹುದು ಹೇಳಿದರು.
ಒಂದು ವೇಳೆ ಟಿಪ್ಪು ಜಯಂತಿ ಆಚರಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲು ಚಿಂತನೆ ನಡೆಸಿರುವುದಾಗಿ ಹೇಳಿದರು.
ಸಂಚಾಲಕ ಮಹಂತೇಶ್ ನಾಯ್ಕ, ವಕೀಲರಾದ ತೇಜಸ್ವಿ ಸೂರ್ಯ, ಜಿ.ಆರ್.ಸಂತೋಷ್ ಮತ್ತಿತರರಿದ್ದರು.