ಕಾಂಗ್ರೇಸ್ನ ಪ್ರಮುಖ ನಾಯಕರನ್ನು ಬಿಜೆಪಿ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಒಪ್ಪಿಕೊಳ್ಳಬೇಕು, ಬಿ.ಎಲ್.ಶಂಕರ್

ಬೆಂಗಳೂರು, ಅ.31-ಮಹಾತ್ಮಗಾಂಧೀಜಿ, ಸರ್ದಾರ್ ವಲ್ಲಭಭಾಯ್ ಪಟೇಲ್, ಇಂದಿರಾಗಾಂಧಿ ಸೇರಿದಂತೆ ಕಾಂಗ್ರೆಸ್ ಎಲ್ಲಾ ಪ್ರಮುಖ ನಾಯಕರನ್ನು ಬಿಜೆಪಿ ಒಳಗೊಂಡಂತೆ ಎಲ್ಲ ವಿರೋಧ ಪಕ್ಷಗಳು ಒಪ್ಪಿಕೊಳ್ಳಲೇಬೇಕು ಎಂದು ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಲ್.ಶಂಕರ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿಂದು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಸಂಸ್ಮರಣೆ ಮತ್ತು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಇಬ್ಬರೂ ನಾಯಕರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದ ನಂತರ ಮಾತನಾಡಿದ ಅವರು, ಬಿಜೆಪಿಗೆ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರನ್ನು ನೆನಪಿಸಿಕೊಳ್ಳುವಂತಹ ಅನಿವಾರ್ಯತೆ ಎದುರಾಗಿದೆ. ಮಹಾತ್ಮಗಾಂಧೀಜಿಯವರನ್ನು ವಿರೋಧಿಸುತ್ತಿದ್ದ ಬಿಜೆಪಿಯವರು ಅನಿವಾರ್ಯವಾಗಿ ಗಾಂಧೀಜಿಯವರ ಹೆಸರಿನಲ್ಲೇ ಸ್ವಚ್ಛ ಭಾರತ ಅಭಿಯಾನ ನಡೆಸುವ ಸ್ಥಿತಿ ನಿರ್ಮಾಣವಾಗಿದೆ.ಮುಂದಿನ ದಿನಗಳಲ್ಲಿ ಇಂದಿರಾಗಾಂಧಿ, ಜವಹರಲಾಲ್ ನೆಹರೂ ಅವರನ್ನು ಬಿಜೆಪಿ ಅವರು ನೆನಪಿಸಿಕೊಂಡು ಗೌರವಿಸಬೇಕಾಗುತ್ತದೆ. ಯಾರೂ ಎಷ್ಟೇ ದುಡ್ಡು ಖರ್ಚು ಮಾಡಿ ಪ್ರತಿಮೆ ನಿರ್ಮಿಸಿದರೂ ಅದು ಕಾಂಗ್ರೆಸ್‍ನ ನಾಯಕರು, ದೇಶದ ಮೊದಲ ಗೃಹ ಸಚಿವರೂ ಆದ ಪಟೇಲರಿಗೆ ಸಲ್ಲಬೇಕಾದ ಗೌರವ ಎಂದರು.

ಕಾಂಗ್ರೆಸ್ ಸರ್ದಾರ್ ವಲ್ಲಭಭಾಯ್ ಪಟೇಲರನ್ನು ನಿರ್ಲಕ್ಷಿಸಿಲ್ಲ. ಅವರಿಗೆ ಸದಾ ಕಾಲ ನಮ್ಮ ಮನಸ್ಸಿನಲ್ಲಿ ಜಾಗ ನೀಡಿದ್ದೇವೆ. ಆದರೆ ಬಿಜೆಪಿಯವರು ಚುನಾವಣೆ ಕಾರಣಕ್ಕಾಗಿ ಪಟೇಲರನ್ನು ಸ್ಮರಿಸಿಕೊಳ್ಳುತ್ತಾರೆ.ಈ ಹಿಂದೆಲ್ಲ ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ನಾಯಕರನ್ನು ಟೀಕೆ ಮಾಡಲಾಗುತ್ತಿತ್ತು.ಆದರೆ ಬದಲಾದ ರಾಜಕೀಯ ಪರಿಸ್ಥಿತಿ ಬಿಜೆಪಿಯವರಿಗೆ ಕಾಂಗ್ರೆಸ್ ಮುಖಂಡರನ್ನು ಹೊಗಳುವಂತಹ ಅನಿವಾರ್ಯತೆ ಸೃಷ್ಟಿಸಿದೆ ಎಂದು ಹೇಳಿದರು.

ಮಹಾತ್ಮಗಾಂಧೀಜಿಯವರಿಗೆ ನೆಹರೂ ಮತ್ತು ಸರ್ದಾರ್ ಪಟೇಲರು ಇಬ್ಬರೂ ನೆಚ್ಚಿನ ಶಿಷ್ಯರಾಗಿದ್ದರು.ವಿದೇಶಿ ವ್ಯವಹಾರಗಳನ್ನು ಉತ್ತಮವಾಗಿ ನಿಭಾಯಿಸಬೇಕಾಗಿದ್ದರಿಂದ ನೆಹರೂ ಅವರನ್ನು ಪ್ರಧಾನಿ ಮಾಡಲಾಯಿತು.ದೇಶದ ಆಂತರಿಕ ಸಮಸ್ಯೆಗಳನ್ನು ಸರಿಪಡಿಸಿ ಒಕ್ಕೂಟ ವ್ಯವಸ್ಥೆ ಗಟ್ಟಿಗೊಳಿಸಲು ಪಟೇಲ್ ಅವರನ್ನು ಗೃಹ ಸಚಿವರನ್ನಾಗಿ ಮಾಡಲಾಯಿತು. ಇಬ್ಬರೂ ದೇಶದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದರು.

ಕಾಂಗ್ರೆಸ್ಸಿಗರು ನಮ್ಮ ನಾಯಕರ ಸಾಧನೆಗಳನ್ನು ಮುಕ್ತ ಮನಸ್ಸಿನಿಂದ ಹೇಳಿಕೊಳ್ಳಬೇಕು.ಏನೂ ಕೆಲಸ ಮಾಡದ ಪಕ್ಷದವರು ಅನಗತ್ಯವಾಗಿ ಹೊಗಳಿಕೆಗಳ ಮೂಲಕವೇ ಜನರನ್ನು ಮರಳು ಮಾಡುವಾಗ, ಪ್ರಾಮಾಣಿಕವಾಗಿ ಕೆಲಸ ಮಾಡಿದ ಕಾಂಗ್ರೆಸ್ಸಿಗರು ತಮ್ಮ ಸಾಧನೆಗಳನ್ನು ಹೇಳಿಕೊಳ್ಳಲು ಹಿಂದೇಟು ಹಾಕುವುದು ಏಕೆ ಎಂದು ಶಂಕರ್ ಪ್ರಶ್ನಿಸಿದರು.

ನಮ್ಮ ಪಕ್ಷದ ಮಹನೀಯರ ಭಾವಚಿತ್ರಗಳಿಗೆ ಹೂವಿನ ಹಾರ ಹಾಕಿ ಕೈ ಮುಗಿದು ಪ್ರಣಾಮ ಸಲ್ಲಿಸುವುದು ಸುಲಭದ ದಾರಿ.ಆದರೆ ಕಾಂಗ್ರೆಸ್ಸಿಗರು ಅಂತಹ ಕೆಲಸ ಮಾಡದೆ ಮಹನೀಯರ ಆದರ್ಶಗಳನ್ನು ಪಾಲಿಸುವಂತಹ ಕಠಿಣ ಹಾದಿಯನ್ನು ಆಯ್ದುಕೊಳ್ಳಬೇಕು ಅದರಲ್ಲೇ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಇಂದಿರಾಗಾಂಧಿಯವರು ರಾಜಕೀಯ ಸ್ಥಿತಿಯನ್ನೇ ಬದಲಾವಣೆ ಮಾಡಿದ್ದರು.ಉಳ್ಳವರಿಗೆ ಮಾತ್ರ ರಾಜಕೀಯ ಎಂಬಂತಹ ಕಾಲದಲ್ಲಿ ಜನಸಾಮಾನ್ಯರಿಗೂ ರಾಜಕೀಯವನ್ನು ಕೈಗೆಟಕುವಂತೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಮೋಟಮ್ಮ, ಹಿರಿಯ ನಾಯಕರಾದ ಎಂ.ವಿ.ರಾಜಶೇಖರನ್, ಎಚ್.ಹನುಮಂತಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ