
ಕೆವಾಡಿಯಾಗ್ರಾಮ, ನರ್ಮದಾ, ಅ.31-ಭಾರತದ ಅಖಂಡತೆ ಮತ್ತು ಏಕತೆ ಇಡೀ ವಿಶ್ವವನ್ನೇ ನಿಬ್ಬೆರಗುಗೊಳಿಸವಂಥದ್ಧು ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ನಾವು ಯಾರಿಗೂ ಗುಲಾಮರಾಗಬೇಕಾದ ಅಗತ್ಯವಿಲ್ಲ. ಅಂಥ ಪ್ರಮೇಯ ಭಾರತಕ್ಕೆ ಎಂದಿಗೂ ಬರುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ನಮ್ಮ ದೇಶದ ಏಕತೆ ಮತ್ತು ಅಖಂಡತೆಗಾಗಿ ಎಲ್ಲರೂ ಒಗ್ಗೂಡಿ ಕೈ ಜೋಡಿಸಬೇಕೆಂದು ಮೋದಿ ದೇಶವಾಸಿಗಳಿಗೆ ಕರೆ ನೀಡಿದ್ದಾರೆ.
ಇಡೀ ಜಗತ್ತೇ ನಿಬ್ಬೆರಗಾಗುವಂತೆ ಮಾಡಿರುವ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ವಿಶ್ವದ ಅತಿ ಎತ್ತರದ 182 ಮೀಟರ್ಗಳ 2,989 ಕೋಟಿ ರೂ.ಗಳ ವೆಚ್ಚದ ಭವ್ಯ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ.
ಅಖಂಡ ಭಾರತದ ಏಕತೆಯ ಹರಿಕಾರ ಸರ್ದಾರ್ ಪಟೇಲ್ ಅವರ 143ನೇ ಜನ್ಮದಿನದ ಪ್ರಯುಕ್ತ ಗುಜರಾತ್ನ ನರ್ಮದಾ ಜಿಲ್ಲೆಯಲ್ಲಿರುವ ಕೆವಾಡಿಯಾ ಗ್ರಾಮದ ಸರ್ದಾರ್ ಸರೋವರ್ ಅಣೆಕಟ್ಟು ಬಳಿ ಇಂದು ಬೆಳಗ್ಗೆ ವಿಶ್ವದ ಅತಿ ಎತ್ತರದ ಭವ್ಯ ಪುತ್ಥಳಿಯನ್ನು ಮೋದಿ ಉದ್ಘಾಟಿಸಿದರು.
ದೇಶದ ಏಕತೆಗೆ ಜಿಂದಾಬಾದ್..! ಪಟೇಲ್ ಅಮರ್ ರಹೇ..! ಎಂಬ ಘೋಷಣೆಗಳನ್ನು ಮೊಳಗಿಸಿದ ಮೋದಿ, ಅಭಿವೃದ್ಧಿಗೆ ಪಟೇಲರ ಹಾದಿ ಆದರ್ಶವಾಗಿದೆ. 1947ರಲ್ಲಿ ಪಟೇಲರು ಒಂದು ಮಾತನ್ನು ಹೇಳಿದ್ದರು. ನಾವು ಯಾರಿಗೂ ಗುಲಾಮರಾಗುವ ಅಗತ್ಯವಿಲ್ಲ , ಅಂತಹ ಪ್ರಮೇಯವೂ ಭಾರತಕ್ಕೆ ಮುಂದೆಂದೂ ಬರುವುದಿಲ್ಲ ಎಂದು ಸಂದೇಶ ಸಾರಿದ್ದರು. ಅವರ ಮಾತು ಇಂದಿಗೂ, ಎಂದೆಂದಿಗೂ ಪ್ರಸ್ತುತ ಎಂದು ಪ್ರಧಾನಿ ಉಲ್ಲೇಖಿಸಿದರು.
ತಮ್ಮ ಭಾಷಣದುದ್ದಕ್ಕೂ ಪಟೇಲರ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಗುಣಗಾನ ಮಾಡಿದ ಪ್ರಧಾನಿ, ಪಟೇಲರು ದೇಶವನ್ನು ಒಗ್ಗೂಡಿಸದಿದ್ದರೆ, ಇನ್ನೊಂದು ರಾಜ್ಯದಲ್ಲಿರುವ ಸಿಂಹಗಳನ್ನು ನೋಡಲು ಅಥವಾ ಸೋಮನಾಥೇಶ್ವರಿಗೆ ಪೂಜೆ ಸಲ್ಲಿಸಲು ಅಥವಾ ಹೈದರಾಬಾದ್ನ ಚಾರ್ಮಿನಾರ್ ನೋಡಲು ವೀಸಾ ಬೇಕಿತ್ತು ಎಂದು ಮೋದಿ ತಿಳಿಸಿದರು.
ಇಂದಿನ ದಿನ ಇತಿಹಾಸ ಪುಟಗಳಲ್ಲಿ ದಾಖಲಾರ್ಹವಾಗಿದೆ. ಈ ಐತಿಹಾಸಿಕ ಕ್ಷಣಕ್ಕಾಗಿ ದೇಶದ ಜನತೆಗೆ ಅಭಿನಂದನೆ ಸಲ್ಲಿಸುವುದಾಗಿ ಪ್ರಧಾನಿ ಹೇಳಿದರು.
ಪಟೇಲರು ಇಲ್ಲದಿದ್ದರೆ ನಮ್ಮ ದೇಶ ಯಾವಾಗಲೋ ಇಬ್ಭಾಗವಾಗಿ ಹರಿದು ಹಂಚಿ ಹೋಗುತ್ತಿತ್ತು. ಆಗಲೂ ಕೂಡ ದೇಶದಲ್ಲಿ ನಿರಾಶವಾದಿ ನಾಯಕರಿದ್ದರು. ಆದರೆ ಅವರಲ್ಲೊಬ್ಬ ಉಕ್ಕಿನ ಮನುಷ್ಯನಂತಹ ಆಶಾವಾದಿ ದೇಶವನ್ನು ವಿಭಜನೆಯಾಗುವುದರಿಂದ ತಪ್ಪಿಸಿ ಅಖಂಡ ಭಾರತದ ಏಕೀಕರಣಕ್ಕಾಗಿ ಭದ್ರ ಬುನಾದಿ ಹಾಕಿಕೊಟ್ಟರು ಎಂದು ಮೋದಿ ಬಣ್ಣಿಸಿದರು.
ಭಾರತದ 500ಕ್ಕೂ ಹೆಚ್ಚು ಪ್ರಾಂತ್ಯಗಳು ಮತ್ತು ಚಿಕ್ಕಪುಟ್ಟ ಪ್ರದೇಶಗಳು ಹರಿದು ಹಂಚಿ ಹೋಗಿದ್ದವು. ಇವೆಲ್ಲವನ್ನು ಒಗ್ಗೂಡಿಸಿ ಅಖಂಡ ಭಾರತದ ಭೂಪಟಕ್ಕೆ ಸ್ಪಷ್ಟ ರೂಪ ನೀಡಿದ ಲೋಹ ಪುರುಷ ಸರ್ದಾರ್ ಪಟೇಲರು ಎಂದು ಮೋದಿ ಮುಕ್ತ ಕಂಠದಿಂದ ಪ್ರಶಂಸಿಸಿದರು.
ದೇಶದ ಪ್ರಥಮ ಗೃಹ ಸಚಿವರು ಹಾಗೂ ಉಪಪ್ರಧಾನಿಯಾಗಿದ್ದ ಸರ್ದಾರರು ಅನೇಕ ಮಹತ್ವಪೂರ್ಣ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರು. ಭಾರತೀಯ ರಾಜಕೀಯದಲ್ಲಿ ಮಹಿಳೆಯರು ಭಾಗವಹಿಸಲು ಪಟೇಲರೇ ಪ್ರೇರಣೆ. ಅಸಮಾನತೆ ಮತ್ತು ತಾರತಮ್ಯದ ವಿರುದ್ಧ ಆಗಲೇ ಅವರು ಧ್ವನಿ ಎತ್ತಿದ್ದರು ಎಂದು ಮೋದಿ ಹೇಳಿದರು.
ಪಟೇಲರ ಜನ್ಮಜಯಂತಿ ಪ್ರಯಕ್ತ ಇಂದು ದೇಶಾದ್ಯಂತ ರಾಷ್ಟ್ರೀಯ ಏಕತಾ ದಿನಾಚರಣೆ ಆಚರಿಸಲಾಗುತ್ತಿದೆ. ಇಂದು ಪ್ರತಿಯೊಬ್ಬ ಭಾರತೀಯರೂ ಹೆಮ್ಮೆ ಪಡುವಂತಹ ಐತಿಹಾಸಿಕ ದಿನ. ನಮ್ಮ ದೇಶದ ಏಕತೆ ಮತ್ತು ಅಖಂಡತೆಗಾಗಿ ಎಲ್ಲರೂ ಒಗ್ಗೂಡಿ ಕೈಜೋಡಿಸಬೇಕೆಂದು ಮೋದಿ ಕರೆ ಕೊಟ್ಟರು.
ಪಟೇಲರ ಏಕತೆಯ ಭವ್ಯ ಪ್ರತಿಮೆಯ ಗುಣವಿಶೇಷಣಗಳನ್ನು ಪಟ್ಟಿ ಮಾಡಿದ ಮೋದಿ, ಈ ಪುತ್ಥಳಿಯು ಭಾರತದ ಭವ್ಯತೆ, ಅಖಂಡತೆ, ಅಸ್ಮಿತೆಯ ಸದೃಢ ಸಂಕೇತವೂ ಆಗಿದೆ. ಮುಖ್ಯವಾಗಿ ಈ ಪ್ರತಿಮೆ ರೈತರ ಸ್ವಾಭಿಮಾನದ ಸಂಕೇತ. ಇದು ಭವಿಷ್ಯದಲ್ಲಿ ಪ್ರೇರಣೆ ನೀಡುವ ಗಗನಚುಂಬಿ ಸಂಕೇತವಾಗಿದೆ ಅಲ್ಲದೆ ಇದು ದೇಶದ ಉನ್ನತ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ತಾಂತ್ರಿಕತೆ ಧ್ಯೋತಕವೂ ಆಗಿದೆ ಎಂದು ಹೇಳಿದ ಅವರು, ಪ್ರತಿಮೆ ಸ್ಥಾಪಿಸಲು ನೆರವಾದ ಶಿಲ್ಪಿಗಳು, ಇಂಜಿನಿಯರ್ಗಳಿಗೆ ಧನ್ಯವಾದ ಹೇಳಿದರು.
ಗುಜರಾತ್ ರಾಜ್ಯಪಾಲ ಒ.ಪಿ. ಕೊಹ್ಲಿ, ಮುಖ್ಯಮಂತ್ರಿ ವಿಜಯ್ ರೂಪಾನಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.