
ಬೆಂಗಳೂರು, ಅ.30- ದಾಸನಪುರ ಉಪನೊಂದಣಾಧಿಕಾರಿಯವರ ಕಚೇರಿ ಮೇಲೆ ಬೆಂಗಳೂರು ಗ್ರಾಮಾಂತರ ಭ್ರಷ್ಟಾಚಾರ ನಿಗ್ರಹ ದಳ ದಾಳಿ ಮಾಡಿ 5.69 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದೆ.
ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ ನಡೆಸಿದ ಶೋಧನಾ ಸಮಯದಲ್ಲಿ ಉಪನೊಂದಣಾಧಿಕಾರಿ ಮತ್ತು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ, ಬ್ರೋಕರ್, ಖಾಸಗಿ ವ್ಯಕ್ತಿಗಳ ಬಳಿಯಿಂದ ಪಡೆದುಕೊಂಡಿದ್ದ ಅನಧಿಕೃತ ಹಣ ಒಟ್ಟು 5,69,210 ರೂ. ಗಳನ್ನು ಎಸಿಬಿ ವಶಪಡಿಸಿಕೊಂಡಿದೆ.
ಸ್ವತ್ತು ನೋಂದಣಿ, ಋಣ ಭಾರ ಪತ್ರ ಖರೀದಿಯ ದಾಸ್ತಾವೇಜುಗಳ ದೃಢೀಕೃತ ಪ್ರತಿಗಳನ್ನು ಪಡೆಯುವ ಸಲುವಾಗಿ ಮತ್ತು ಇನ್ನಿತರೆ ಸರ್ಕಾರಿ ಕೆಲಸಕ್ಕಾಗಿ ಕಚೇರಿಗೆ ಬರುವ ಸಾರ್ವಜನಿಕರಿಂದ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಯವರು ಹಣ ಪಡೆಯುತ್ತಿದ್ದಾರೆ ಎಂಬ ದೂರಿನ ಮೇರೆಗೆ ಎಸಿಬಿ ದಾಳಿ ಮಾಡಿತು.
ಕಚೇರಿಗೆ ಕೆಲಸದ ನಿಮಿತ್ತ ಬರುವವರಿಂದ ಲಂಚದ ಹಣ ಪಡೆಯುತ್ತಿದ್ದ ಬಗ್ಗೆ ನಿಖರ ಮಾಹಿತಿಯನ್ನಾಧರಿಸಿ ಎಸಿಬಿ ತಂಡ ದಾಳಿ ಮಾಡಿ ಹಣ ವಶಪಡಿಸಿಕೊಂಡಿದೆ.