ನವದೆಹಲಿ: ಭಾರತದಲ್ಲಿ ವಾಯುಮಾಲಿನ್ಯದಿಂದ ಐದು ವರ್ಷದೊಳಗಿನ 1.25 ಲಕ್ಷ ಹಸುಗೂಸುಗಳು 2016ರಲ್ಲಿ ಅಸುನೀಗಿವೆ. ಜಾಗತಿಕವಾಗಿ ವಾಯುಮಾಲಿನ್ಯದಿಂದಾಗಿ ಅತಿಹೆಚ್ಚು ಮಕ್ಕಳು ಅಸುನೀಗಿದ ಐದು ದೇಶಗಳಲ್ಲಿ ಭಾರತವೂ ಒಂದಾಗಿದೆ.
ಈ ಹೊಸ ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ‘ವಾಯು ಮಾಲಿನ್ಯ ಮತ್ತು ಮಕ್ಕಳ ಆರೋಗ್ಯ; ಸ್ವಚ್ಛ ಗಾಳಿ ಘೋಷಣೆ’ ಎಂಬ ಅಭಿಯಾನದಡಿ ಬಿಡುಗಡೆ ಮಾಡಿದೆ. ಕೆಳ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಈ ಪ್ರಮಾಣ ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ವಾಯುಮಾಲಿನ್ಯ ಮತ್ತು ಆರೋಗ್ಯ ಸಮ್ಮೇಳನದಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.
ಮನೆಯೊಳಗೆ ಸೃಷ್ಟಿಯಾಗುವ ವಾಯುಮಾಲಿನ್ಯದಿಂದಾಗಿ ಭಾರತದಲ್ಲಿ ಐದು ವರ್ಷದೊಳಗಿನ 67,000 ಮಕ್ಕಳು ಅಸುನೀಗಿದ್ದಾರೆ. ಹೊರಭಾಗದ ವಾಯುಮಾಲಿನ್ಯದಿಂದಾಗಿ ಅಂದರೆ ವಾಹನಗಳಿಂದ ಉಂಟಾಗುವ ಮಾಲಿನ್ಯದಿಂದ ಸರಿಸುಮಾರು 61,000 ಸಾವಿರ ಐದು ವರ್ಷದೊಳಗಿನ ಮಕ್ಕಳು ಭಾರತದಲ್ಲಿ ಮೃತಪಟ್ಟಿವೆ ಎಂದು ಈ ಅಧ್ಯಯನ ವರದಿ ಹೇಳಿದೆ.
ದೇಶೀಯ ಸಮೀಕ್ಷಾ ವರದಿಗಳ ಪ್ರಕಾರ, ಐದು ವರ್ಷದೊಳಗಿನ ಮಕ್ಕಳು ಹೊರಭಾಗದ ಪರಿಸರ ಮಾಲಿನ್ಯದಿಂದಾಗಿಯೇ ಭಾರತದಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗುತ್ತಿವೆ ಎಂದು ಹೇಳಿದೆ.
ವಿಶೇಷವಾಗಿ ಮಕ್ಕಳು ಭ್ರೂಣಾವಸ್ಥೆಯ ಬೆಳವಣಿಗೆ ಸಮಯದಲ್ಲಿ ಮತ್ತು ಅವರ ಆರಂಭಿಕ ವರ್ಷಗಳಲ್ಲಿ ವಾಯುಮಾಲಿನ್ಯದ ನೇರ ಪರಿಣಾಮವನ್ನು ಎದುರಿಸುತ್ತವೆ. ಸಾಮಾನ್ಯವಾಗಿ ಮಕ್ಕಳು ವಯಸ್ಕರಿಗಿಂತ ವೇಗವಾಗಿ ಉಸಿರಾಡಿ, ಹೆಚ್ಚು ಗಾಳಿಯನ್ನು ಸೇವಿಸುತ್ತವೆ. ಗಾಳಿಯಲ್ಲಿನ ಮಾಲಿನ್ಯ ನೇರವಾಗಿ ಮಕ್ಕಳ ದೇಹ ಸೇರುತ್ತದೆ ಮತ್ತು ಭೂಮಿಗೆ ಸಮೀಪದಲ್ಲೇ ಇರುವುದರಿಂದ ಮಾಲಿನ್ಯಪೂರಿತ ಗಾಳಿ ಅವರ ದೇಹ ಸೇರುತ್ತಿದೆ. ಇದರಿಂದ ಮಕ್ಕಳ ಸೂಕ್ಷ್ಮ ಅಂಗಾಂಗಗಳ ಮೇಲೆ ಮಾರಣಾಂತಿಕ ಪರಿಣಾಮ ಬೀರಿದೆ ಎಂದು ವರದಿ ಹೇಳಿದೆ.
ಮಕ್ಕಳು ಹೆಚ್ಚು ಸಮಯದಲ್ಲಿ ಮೈದಾನದಲ್ಲಿ, ದೈಹಿಕ ಚಟುವಟಿಕೆಯ ಆಟೋಟಗಳಲ್ಲಿ ತೊಡಗಿಸಿಕೊಂಡರೆ, ವಾಯುಮಾಲಿನ್ಯವನ್ನು ಸಮರ್ಥವಾಗಿ ಎದುರಿಸಲು ಶಕ್ತಿ ಬರುತ್ತದೆ. ಆದರೆ, ಈಗಿನ ಮಕ್ಕಳು ದೈಹಿಕ ಚಟುವಟಿಕೆ ಇಲ್ಲದೆ, ಮನೆಯ ಒಳಗೆ ಹೆಚ್ಚು ಸಮಯ ಕಳೆಯುವುದರಿಂದ ಮನೆಯೊಳಗಿನ ವಾಯುಮಾಲಿನ್ಯಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ತಾಯಿ ಅಡುಗೆ ಮಾಡುವಾಗ ಮಕ್ಕಳು ಅವರೊಂದಿಗೆ ಇರುತ್ತದೆ. ಅಡುಗೆ ಮನೆಯಲ್ಲಿ ಇಂಧನ ಉರಿಸುತ್ತಿರುವುದರಿಂದ ಅದು ನೇರವಾಗಿ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಹೆಚ್ಚಾಗಿ ಮಕ್ಕಳ ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮವಾಗುತ್ತಿದೆ ಎಂದು ವರದಿ ತಿಳಿಸಿದೆ.